ಪ್ರಪಂಚದ ಆರ್ಥಿಕ ವ್ಯವಸ್ಥೆಯ ವೇಗ 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಮಂದಗತಿಯಲ್ಲಿ ಸಾಗುತ್ತಿರುವುದು ಸಂದೇಹವಾಗಿದೆ. ಅಮೆರಿಕಾದ ಕೆಲವು ಬಲಪಂಥೀಯ ಅರ್ಥಶಾಸ್ತ್ರಜ್ಞರು ಕೂಡ ‘ಇದು ಸುದೀರ್ಘ ಆರ್ಥಿಕ ಹಿಂಜರಿತ’ (ಆ ಪದದ ಅವರ ವ್ಯಾಖ್ಯಾನವು ವಿಚಿತ್ರವಾಗಿದೆ) ಎಂದು ಹೇಳುತ್ತಾರೆ. ಈ ಅಂಶವನ್ನು ಕೆಲವು ಅಂಕಿಅಂಶಗಳ ಮೂಲಕ ವಿವರಿಸುವುದು ಈ ಲೇಖನದ ಉದ್ದೇಶವಾಗಿದೆ.
ಹೆಚ್ಚಿನ ದೇಶಗಳಲ್ಲಿ GDP (ಒಟ್ಟು ದೇಶೀಯ ಉತ್ಪನ್ನ) ಲೆಕ್ಕಾಚಾರ ಮಾಡಲು ಬಳಸುವ ವಿಧಾನಗಳು ವಿಶ್ವಾಸಾರ್ಹವಲ್ಲ. ಇನ್ನು ಇಡೀ ಪ್ರಪಂಚಕ್ಕೆ ಸಂಬಂಧಿಸಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾರತದಲ್ಲಿ ಅಧಿಕೃತ ಅಂಕಿಅಂಶಗಳನ್ನು ಅನೇಕ ಸಂಶೋಧಕರು ಪ್ರಶ್ನಿಸುತ್ತಾರೆ. ಶೇ.7ಕ್ಕಿಂತಲೂ ಹೆಚ್ಚಿನ ಬೆಳವಣಿಗೆ ರೇಟ್ ಇದೆ ಎಂದು ಅಧಿಕಾರಿಗಳು ತೋರಿಸುತ್ತಾರೆ. ಆದರೆ ಇದು ಶೇಕಡಾ 4ರಿಂದ 4.5ಕ್ಕಿಂತ ಹೆಚ್ಚಿಲ್ಲ. ಮತ್ತು ಕಳೆದ ಕೆಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ ಎಂದು ಈ ಸಂಶೋಧಕರು ದೃಢವಾಗಿ ಒತ್ತಿ ಹೇಳುತ್ತಾರೆ. ಆರ್ಥಿಕತೆಯು ಸರ್ಕಾರದ ಹಿಡಿತದಲ್ಲಿದ್ದಾಗ ಹಿಂದಿನ ಅವಧಿಗೆ ಹೋಲಿಸಿದರೆ ನವ ಉದಾರೀಕರಣದ ನೀತಿಗಳ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದು ಅರ್ಥಹೀನವಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ಬೆಳವಣಿಗೆ ದರ ಹೆಚ್ಚೇನೂ ಆಗಿಲ್ಲ. ಇದಲ್ಲದೆ, ಅಸಮಾನತೆಗಳು ಹೆಚ್ಚುತ್ತಿವೆ. ಪೌಷ್ಟಿಕಾಂಶದ ಲಭ್ಯತೆಯ ಬಗ್ಗೆ ಲಭ್ಯವಿರುವ ಅಂಕಿಅಂಶಗಳಿಂದ, ದುಡಿಯುವ ಜನಸಂಖ್ಯೆಯ ಸ್ಥಿತಿಯು ಗಮನಾರ್ಹವಾಗಿ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಸ್ಥಿರವಲ್ಲದ GDP ಅಂಕಿಅಂಶಗಳನ್ನು ಬದಿಗಿಟ್ಟು, ಪ್ರಪಂಚದ GDP ಕಥೆ ಏನೆಂದು ನೋಡೋಣ.
ಇದಕ್ಕಾಗಿ ನಾನು ವಿಶ್ವಬ್ಯಾಂಕ್ ಅಂಕಿಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದೇನೆ. 2015ರ ದರ ಆಯಾ ದೇಶಗಳಲ್ಲಿ ಹೇಗಿದೆಯೋ, ಪರಿಶೀಲಿಸಿ, ಅವುಗಳನ್ನು 2015 ರ ಡಾಲರ್ನೊಂದಿಗೆ ಆಯಾ ದೇಶಗಳ ಕರೆನ್ಸಿ ವಿನಿಮಯ ದರವನ್ನು ಗಣನೆಗೆ ತೆಗೆದುಕೊಂಡು ಆ ದೇಶಗಳಿಗೆ GDP ಅಂಕಿಅಂಶಗಳನ್ನು ಅಂದಾಜಿಸಿದರು.1961 ರಿಂದ ಕಳೆದ ಕಾಲಾವಧಿಯನ್ನು ಕೆಲವು ಉಪ-ಅವಧಿಗಳನ್ನಾಗಿ ವಿಂಗಡಿಸಿ ಮತ್ತು ಆ ಉಪ ಅವಧಿಗಳಲ್ಲಿನ ಬೆಳವಣಿಗೆಯನ್ನು ಪರಿಶೀಲಿಸುವುದು ಸ್ವಲ್ಪ ಸಿಕ್ಕುಗಳಿಂದ ಕೂಡಿದ ಸಮಸ್ಯೆಯಾಗಿದೆ. ಒಂದು ದಶಕವನ್ನು ಒಂದು ಉಪ ಅವಧಿಯಾಗಿ ವಿಂಗಡಿಸಿದಾಗ ಸಮಸ್ಯೆ ಉದ್ಭವಿಸುತ್ತದೆ. ಆ ದಶಕದ ಮೊದಲ ವರ್ಷದಲ್ಲಿ ಬೆಳವಣಿಗೆಯ ದರವು ತುಂಬಾ ಕಡಿಮೆಯಿದ್ದರೆ, ಅದಕ್ಕೆ ಅನುಗುಣವಾಗಿ ಹೋಲಿಸಿದಾಗ, ದಶಕದ ಸಂಪೂರ್ಣ ಬೆಳವಣಿಗೆಯ ದರ ತುಂಬಾ ಹೆಚ್ಚಾಗಿರುತ್ತದೆ ಎಂದು ಲೆಕ್ಕಹಾಕಲಾಗುತ್ತದೆ. ಆದ್ದರಿಂದ, ಸರಿಯಾದ ಅಂದಾಜುಗಳನ್ನು ಮಾಡಲು ನಾನು 1961 ರಿಂದ ಹೆಚ್ಚಿನ ಬೆಳವಣಿಗೆ ದರದೊಂದಿಗೆ ವರ್ಷಗಳನ್ನು ಆಯ್ಕೆ ಮಾಡಿದ್ದೇನೆ. ಈ ರೀತಿ ನೋಡಿದಾಗ 1961, 1973, 1984, 1997, 2007 ಮತ್ತು 2018 ರ ವರ್ಷಗಳಲ್ಲಿ ಅತ್ಯಧಿಕ ಬೆಳವಣಿಗೆಯ ದರವನ್ನು ಗಮನಿಸಲಾಗಿದೆ. ಈಗ ನಾನು ಈ ಪ್ರತಿ ಎರಡರ ನಡುವಿನ ಬೆಳವಣಿಗೆಯ ದರವನ್ನು ಪರಿಶೀಲಿಸಿದ್ದೇನೆ. ಆ ದರಗಳು ಈ ಕೆಳಗಿನಂತಿವೆ (ಕೋಷ್ಟಕ)
ಪ್ರತಿ ಉಪ ಅವಧಿಗೆ GDP ಬೆಳವಣಿಗೆ ದರ
1961-73 ಶೇ. 5.4
1973-84 ಶೇ 2.9
1984-97 ಶೇ. 3.1
1997-2007 ಶೇ 3.5
2007-2018 ಶೇ. 2.7
ಮೇಲಿನ ಅಂಕಿ ಅಂಶಗಳಿಂದ ಮೂರು ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಮೊದಲನೆಯದು: ಒಟ್ಟಾರೆಯಾಗಿ, ಪ್ರಭುತ್ವದ ನಿಯಂತ್ರಣದಲ್ಲಿ ದೇಶಗಳ ಆರ್ಥಿಕ ವ್ಯವಸ್ಥೆ ನಡೆಯುವಾಗ ವಿಶ್ವ ಆರ್ಥಿಕತೆಯ ಬೆಳವಣಿಗೆ ದರ, ನವ ಉದಾರೀಕರಣದ ಅವಧಿಗಿಂತ ಬಹಳ ಹೆಚ್ಚಾಗಿತ್ತು. ಮಾರುಕಟ್ಟೆಯೇ ಶಕ್ತಿಶಾಲಿ, ಸರ್ವ ಸಂಪನ್ನ ಎಂದು ಈಗ ನಡೆಯುತ್ತಿರುವ ಚರ್ಚೆಗಳಲ್ಲಿ ನವ ಉದಾರೀಕರಣದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರವು ತುಂಬಾ ಹೆಚ್ಚಿತ್ತು ಎಂಬ ಅಭಿಪ್ರಾಯವೂ ಇದೆ. ಈ ಅಭಿಪ್ರಾಯವು ಸಂಪೂರ್ಣವಾಗಿ ತಪ್ಪು. ವಾಸ್ತವವಾಗಿ, ನವ ಉದಾರೀಕರಣದ ಅವಧಿಯಲ್ಲಿ ವಿಶ್ವ ಆರ್ಥಿಕತೆಯ ಬೆಳವಣಿಗೆಯ ದರವು ಗಣನೀಯವಾಗಿ ಮಂದಗತಿಯಲ್ಲಿದೆ.
ಎರಡನೆಯದು: ಪ್ರಭುತ್ವದ ನಿಯಂತ್ರಣದಲ್ಲಿ ಆರ್ಥಿಕ ವ್ಯವಸ್ಥೆಗಳು ನಡೆಯುವ ಅವಧಿ ಮತ್ತು ನವ ಉದಾರವಾದಿ ನೀತಿಗಳ ಅನುಷ್ಠಾನದ ನಡುವೆ ಒಂದು ಅವಧಿ ಇತ್ತು. ಈ ಅವಧಿಯಲ್ಲಿ ಬೆಳವಣಿಗೆ ದರ ಶೇ.5.4ರಿಂದ ಶೇ.2.9ಕ್ಕೆ ಕುಸಿದಿದೆ. ಹಣದುಬ್ಬರವು 1967 ರಿಂದ ವೇಗವಾಯಿತು ಮತ್ತು 1973-74 ರವರೆಗೆ ಮುಂದುವರೆಯಿತು. ಇದನ್ನು ನಿಯಂತ್ರಿಸಲು, ಬಂಡವಾಳಶಾಹಿ ವರ್ಗದ ಪ್ರಭುತ್ವ ವೆಚ್ಚವನ್ನು ಕಡಿತಗೊಳಿಸುವ ಮತ್ತು ನಿರುದ್ಯೋಗವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುವ ತಂತ್ರವನ್ನು ಅಳವಡಿಸಿಕೊಂಡಿತು. ಈ ತಂತ್ರದ ಫಲಿತವಾಗಿ, 1973 ರಿಂದ ಬೆಳವಣಿಗೆಯ ದರ ಮಂದಗತಿಯಲ್ಲಿ ಸಾಗಿದೆ. ಅಂದಿನಿಂದ, ದೇಶಗಳ ಆರ್ಥಿಕ ವ್ಯವಸ್ಥೆಗಳ ಮೇಲೆ ಪ್ರಭುತ್ವದ ನಿಯಂತ್ರಣ ಇರುವ ವ್ಯವಸ್ಥೆ ನಿಂತುಹೋಯಿತು. ಬೆಳವಣಿಗೆಯ ದರದಲ್ಲಿನ ಈ ಕುಸಿತವು ನವ ಉದಾರವಾದಿ ನೀತಿಗಳ ಜಾರಿಗೆ ಅಗತ್ಯವಾದ ನೆಲೆಯನ್ನು ಒದಗಿಸಿತು. ಈಗಾಗಲೇ ಹೆಚ್ಚುತ್ತಿರುವ ಮತ್ತು ಹೆಚ್ಚು ಹೆಚ್ಚು ಅಂತರರಾಷ್ಟ್ರೀಯ ಸ್ವರೂಪವನ್ನು ಪಡೆಯುತ್ತಿದ್ದ, ಹಣಕಾಸಿನ ಹೂಡಿಕೆಯು ಹಿಂದಿನ ನವಉದಾರವಾದಿ ನೀತಿಗಳಿಗೆ ಅನುಕೂಲವಾಗುವಂತೆ ಒತ್ತಡವನ್ನು ಹೆಚ್ಚಿಸುತ್ತಿದೆ. ಆ ಸಮಯದಲ್ಲಿಯೇ ಮೊದಲು ಹಣದುಬ್ಬರ ಮತ್ತು ನಂತರ ಕುಸಿತವು ಹಳೆಯ ನೀತಿಗಳ ಪರಿಣಾಮವಾಗಿ ಸಂಭವಿಸಿತು.
ಮೂರನೆಯದು: ಕೋಷ್ಟಕದಲ್ಲಿ ನೀಡಲಾದ ಅಂಕಿಅಂಶಗಳನ್ನು ನೋಡಿದರೆ, ಅಮೆರಿಕದಲ್ಲಿ ಹೌಸಿಂಗ್ (ವಸತಿ) ಎಂಬ ಗುಳ್ಳೆ ಒಡೆದ ನಂತರದ ಕಾಲದಲ್ಲಿ ಬೆಳವಣಿಗೆಯ ದರ ಮಂದಗತಿಯಲ್ಲೇ ಇದೆ. ವಸತಿ ಗುಳ್ಳೆ ಒಡೆದ ನಂತರ, ಇಡೀ ಬಂಡವಾಳಶಾಹಿ ಪ್ರಪಂಚವು ಬಿಕ್ಕಟ್ಟಿನಲ್ಲಿ ಸಿಲುಕಿತು. ನಂತರ ಆರ್ಥಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಪ್ರಭುತ್ವ ಬೃಹತ್ ಪ್ರಮಾಣದಲ್ಲಿ ಮಧ್ಯಪ್ರವೇಶಿಸಿತು (ಆರ್ಥಿಕ ವ್ಯವಸ್ಥೆಯಲ್ಲಿ ಪ್ರಭುತ್ವ ಹಸ್ತಕ್ಷೇಪ ಮಾಡಬಾರದೆಂಬ ನವ ಉದಾರವಾದಿ ನೀತಿ ಇದರ ಮೂಲಕ ಬೆಳಕಿಗೆ ಬಂದಿತು. ಆದರೆ ವಾಸ್ತವವಾಗಿ ಆರ್ಥಿಕ ವ್ಯವಸ್ಥೆ ಅದರಿಂದ ಯಾವುದೇ ಪ್ರೇರಣೆ ಪಡೆಯಲಿಲ್ಲ. ಬೆಳವಣಿಗೆಯ ದರವನ್ನು ಹೆಚ್ಚಿಸಲು ಸರ್ಕಾರದ ವೆಚ್ಚ ಹೆಚ್ಚಳ, ವಸತಿ ಗುಳ್ಳೆಯಂತೆ ಬೇರಾವುದಾದರು ಗುಳ್ಳೆಗಳು ಏರ್ಪಟ್ಟು, ತಾತ್ಕಾಲಿಕವಾಗಿ ಬೆಳವಣಿಗೆಯ ದರವನ್ನು ಹೆಚ್ಚಿಸಲು ಸಹಾಯ ಮಾಡುವಂತದ್ದೂ ಸಹ ನಡೆದಿಲ್ಲ.
ನಾವು 2018 ಅನ್ನು ಕೊನೆಯ ಗರಿಷ್ಠ ಬೆಳವಣಿಗೆಯ ವರ್ಷವೆಂದು ತೆಗೆದುಕೊಂಡಿದ್ದೇವೆ. ತದನಂತರ, ಬೆಳವಣಿಗೆಯ ದರ ತುಂಬಾ ಅನ್ಯಾಯವಾಗಿ ಕುಸಿದಿದೆ. 2018 ಮತ್ತು 2022 ರ ನಡುವಿನ ಬೆಳವಣಿಗೆಯ ದರ ಕೇವಲ ಶೇ. 2.1 ಮಾತ್ರವೇ ಇತ್ತು. ವಿಶ್ವದ ಜನಸಂಖ್ಯೆಯ ಬೆಳವಣಿಗೆ ದರ ಸುಮಾರು ಶೇ. 1 ರಷ್ಟು ಇತ್ತು. (ನಮ್ಮ ದೇಶದ ಜನಗಣತಿಯನ್ನು 2021 ರಲ್ಲಿ ಸಂಗ್ರಹಿಸಬೇಕಿತ್ತು. ಆದರೆ ಇದುವರೆಗೆ ಪ್ರಾರಂಭಿಸಿಲ್ಲ). ಇದನ್ನು ಗಣನೆಗೆ ತೆಗೆದುಕೊಂಡರೆ, ವಿಶ್ವದ ತಲಾ ಆದಾಯವು ಕೇವಲ ಶೇಕಡಾ 1 ರಷ್ಟು ಮಾತ್ರವೇ ಬೆಳೆಯುತ್ತಿದೆ ಎಂದು ಭಾವಿಸಬೇಕು. ಆದರೆ, ಜಗತ್ತಿನ ಆದಾಯದ ನಡುವೆ ಅಸಮಾನತೆಗಳು ಹೆಚ್ಚುತ್ತಿದೆ. ಅದರಂತೆ, ಪ್ರಪಂಚದ ಮೆಜಾರಿಟಿ ಜನಸಂಖ್ಯೆಯ ಆದಾಯವು ಬೆಳವಣಿಗೆಯಿಲ್ಲದೆ ಕುಗ್ಗುವುದು ಅಥವಾ ಕುಂಠಿತವಾಗಿದೆ ನಡೆಯುತ್ತದೆ. ಇದನ್ನು ವಿವರಿಸಲು ನಾನು ಈ ಕೆಳಗಿನ ವಿಷಯಗಳನ್ನು ಉಲ್ಲೇಖಿಸುತ್ತೇನೆ. ಪ್ರಪಂಚ ಆದಾಯದ ಮೊತ್ತದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನದನ್ನು ಜನಸಂಖ್ಯೆಯಲ್ಲಿ ಅತ್ಯಂತ ಶ್ರೀಮಂತರಾದ ಶೇ.10 ರಷ್ಟು ಜನರು ಗಳಿಸುತ್ತಾರೆ. ಅವರ ಆದಾಯ ಪ್ರತಿ ವರ್ಷ ಕನಿಷ್ಠ ಎರಡು ಪ್ರತಿಶತದಷ್ಟು ಹೆಚ್ಚುತ್ತಿದ್ದರೆ, 90 ಪ್ರತಿಶತದಷ್ಟು ಜನರ ಆದಾಯವು ಯಾವುದೇ ಹೆಚ್ಚಳವಿಲ್ಲದೆ ಸ್ಥಗಿತಗೊಳ್ಳುತ್ತದೆ. ಅಂದರೆ ನವ ಉದಾರವಾದದ ಕೊನೆಯ ಹಂತದಲ್ಲಿ, ಬಂಡವಾಳಶಾಹಿ ವ್ಯವಸ್ಥೆಯು ಪ್ರಪಂಚದ ಬಹುಪಾಲು ಜನಸಂಖ್ಯೆಯನ್ನು ಆದಾಯವನ್ನು ಹೆಚ್ಚಿಸದೆ ಕುಂಠಿತವಾಗುವಂತೆ ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಇದು ಹಳೆಯ ವಸಾಹತುಶಾಹಿ ಯುಗವನ್ನು ನೆನಪಿಸುತ್ತದೆ. ಆಗಲೂ ಜಗತ್ತಿನ ಬಹುಪಾಲು ಜನಸಂಖ್ಯೆಯ ನೈಜ ಆದಾಯ ಕುಸಿದಿದೆಯೇ ಹೊರತು ಹೆಚ್ಚಿಲ್ಲ.
ಬೆಳವಣಿಗೆ ದರದಲ್ಲಿನ ಈ ಮಂದಗತಿಯೂ ತಾತ್ಕಾಲಿಕ ಸಮಸ್ಯೆಯಾಗಿದೆ. ಮತ್ತು ಶೀಘ್ರದಲ್ಲೇ ಹೊರಬರಲು ನಿರೀಕ್ಷಿಸಲಾಗುವುದಿಲ್ಲ. ಈ ಪರಿಸ್ಥಿತಿಯು ನವ ಉದಾರವಾದಿ ನೀತಿಗಳ ಪರಿಣಾಮವಾಗಿದೆ. ಈಗ, ವಿಶ್ವ ಆರ್ಥಿಕತೆಯ ಬೆಳವಣಿಗೆಯ ದರ ಹೆಚ್ಚಾಗಬೇಕೆಂದರೆ, ವಿಶ್ವ ಆರ್ಥಿಕತೆಯ ಬೇಡಿಕೆಯು ಹೆಚ್ಚಾಗಬೇಕು. ಅಂದರೆ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಬೇಕು. ಜನರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅದಕ್ಕೆ ತಕ್ಕಂತೆ ವೆಚ್ಚವನ್ನು ಹೆಚ್ಚಿಸಬೇಕು. ಆ ಹೆಚ್ಚಿದ ವೆಚ್ಚವನ್ನು ಹಣಕಾಸು ಕೊರತೆಯನ್ನು ಹೆಚ್ಚಿಸುವ ಮೂಲಕ ಅಥವಾ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಮೂಲಕ ಪೂರೈಸಬೇಕು. ಆದರೆ ಅಂತರಾಷ್ಟ್ರೀಯ ಹಣಕಾಸು ಬಂಡವಾಳ ಈ ಎರಡರಲ್ಲಿ ಯಾವುದನ್ನೂ ಸ್ವೀಕರಿಸುವುದಿಲ್ಲ. ಆಯಾ ದೇಶಗಳಿಗೆ ಸರ್ಕಾರಗಳು ಬೇರೆಬೇರೆಯಾಗಿದೆ. ಆದರೆ ವಿತ್ತೀಯ (ಹಣಕಾಸು) ಹೂಡಿಕೆಯು ಅಂತಾರಾಷ್ಟ್ರೀಯ ಸ್ವರೂಪದ್ದಾಗಿದೆ. ಆದ್ದರಿಂದ, ಯಾವುದೇ ದೇಶವು ತನ್ನ ಸೂಚನೆಗಳಿಂದ ವಿಮುಖವಾದರೆ, ಹಣಕಾಸು ಬಂಡವಾಳ ಕ್ಷಣಗಳಲ್ಲಿ ಆ ದೇಶವನ್ನು ಬಿಟ್ಟು ಹೋಗುತ್ತದೆ. ಅದು ಹೋಗದಂತೆ ತಡೆಯಬೇಕಾದರೆ ಆಯಾ ದೇಶಗಳ ಸರ್ಕಾರಗಳು ಅಂತರಾಷ್ಟ್ರೀಯ ಹಣಕಾಸು ಹೂಡಿಕೆದಾರರ ಪಾದಗಳಿಗೆ ತಲೆಬಾಗಬೇಕು. ಆದ್ದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವುದು ಮತ್ತು ಸರ್ಕಾರದ ಹಸ್ತಕ್ಷೇಪದ ಮೂಲಕ ಜನರ ಕೊಂಡುಕೊಳ್ಳುವ ಶಕ್ತಿಯನ್ನು ಈ ನವ ಉದಾರವಾದಿ ಚೌಕಟ್ಟಿನೊಳಗೆ ಮಾಡಲಾಗುವುದಿಲ್ಲ. ಆಯಾ ದೇಶಗಳ ಸರ್ಕಾರಗಳು ಹಣಕಾಸು ನೀತಿಯ ಮೂಲಕ ಮಾತ್ರ ಮಧ್ಯಪ್ರವೇಶಿಸಬಹುದು. ಇಲ್ಲಿಯೂ ಕೂಡ ಒಂದು ದೇಶವು ತನ್ನ ಬಡ್ಡಿದರಗಳನ್ನು ಶ್ರೀಮಂತ ದೇಶಗಳಲ್ಲಿ ಚಾಲ್ತಿಯಲ್ಲಿರುವ ಬಡ್ಡಿದರಕ್ಕಿಂತ ಕಡಿಮೆ ನಿಗದಿಪಡಿಸಬಾರದು. ವಿಶೇಷವಾಗಿ ಅಮೆರಿಕಾದಲ್ಲಿನ ಬಡ್ಡಿದರಗಳಿಗೆ ಹೋಲಿಸಿದರೆ, ವ್ಯತ್ಯಾಸ ಹೆಚ್ಚು ಇರಬಾರದು, ಯಾವುದೇ ಸರ್ಕಾರವು ಬಡ್ಡಿದರಗಳನ್ನು ಕಡಿಮೆ ಮಾಡಲು ಮತ್ತು ಜನರಿಗೆ ಹೆಚ್ಚಿನ ಹಣವನ್ನು ಲಭ್ಯವಾಗುವಂತೆ ಮಾಡಲು ಬಯಸಿದರೆ, ಆ ಕಡಿಮೆ ಬಡ್ಡಿದರಗಳು ಆಕರ್ಷಣೀಯವಾಗಿಲ್ಲವೆಂದು ಇಲ್ಲಿನ ಬ್ಯಾಂಕುಗಳಲ್ಲಿರುವ ಠೇವಣಿಗಳನ್ನು ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಬೇರೆಡೆಗೆ ತೆರಳಿಸುತ್ತದೆ. ಪ್ರಸ್ತುತ ತನಗೆ ಬೇಕಾದಂತೆ ಬಡ್ಡಿದರಗಳನ್ನು ಏರಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಅಮೆರಿಕಕ್ಕೆ ಮಾತ್ರವೇ ಇದೆ. ಆದ್ದರಿಂದ, ಅಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಬಡ್ಡಿದರಗಳನ್ನು ಕಡಿಮೆ ಮಾಡಿದರೆ, ಇತರೆ ದೇಶಗಳಲ್ಲಿಯೂ ಬಡ್ಡಿದರಗಳನ್ನು ಕಡಿಮೆ ಮಾಡಬಹುದು. ಆದರೆ, ಅಮೆರಿಕದಲ್ಲಿ ಬಡ್ಡಿದರಗಳು ಬಹುತೇಕ ಶೂನ್ಯ ಶೇಕಡಾವನ್ನು ತಲುಪಿವೆ. ಆದರೆ, ಆರ್ಥಿಕತೆ ಚೇತರಿಸಿಕೊಳ್ಳುತ್ತಿಲ್ಲ. ದೀರ್ಘಾವಧಿಯವರೆಗೆ ಬಡ್ಡಿದರಗಳು ತುಂಬಾ ಕಡಿಮೆ ಇರಿಸಲ್ಪಟ್ಟಿದ್ದರಿಂದ, ಕಾರ್ಪೊರೇಟ್ಗಳು ತಮ್ಮ ಲಾಭದ ಪ್ರಮಾಣವನ್ನು ಹೆಚ್ಚಿಸಲು ಸರಕುಗಳ ಬೆಲೆಗಳನ್ನು ಹೆಚ್ಚಿಸಲು ಪ್ರಾರಂಭಿಸಿದವು. ಅದರೊಂದಿಗೆ ಹಣದುಬ್ಬರವು ವೇಗವನ್ನು ಪಡೆದುಕೊಂಡಿತು.
ಪಾಪ! ಕೇನ್ಸ್! ಸಮಾಜವಾದಿ ಕ್ರಾಂತಿಯಿಲ್ಲದೆ ಬಂಡವಾಳಶಾಹಿ ವ್ಯವಸ್ಥೆಯು ದೀರ್ಘಕಾಲ ಮುಂದುವರಿಯುತ್ತದೆ ಎಂದು ಅವರು ಕನಸು ಕಂಡರು. ಅದಕ್ಕೆ ಪರಿಹಾರವಾಗಿ ಪ್ರಭುತ್ವದ ಹಸ್ತಕ್ಷೇಪವನ್ನು ಸೂಚಿಸಿದರು. ಆದರೆ ಅದು ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಕೇನ್ಸ್ನ ಕನಸು ದುಃಸ್ವಪ್ನವಾಗಿ ಉಳಿದಿದೆ. ನವ ಉದಾರವಾದಿ ಬಂಡವಾಳಶಾಹಿಯ ಪ್ರಸ್ತುತ ಸ್ಥಿತಿ ಇದನ್ನು ಸ್ಪಷ್ಟಪಡಿಸುತ್ತದೆ.
ಲೇಖಕರು : ಪ್ರಭಾತ್ ಪಟ್ಮಾಯಕ್
ಅನುವಾದ : ರೇಣುಕಾ ಭಾರತಿ
Leave a reply