ಸಂಘಪರಿವಾರ ಅಥವಾ ಹಿಂದುತ್ವವಾದಿಗಳು ಈಗೀಗ ಯಾವ ಕ್ರೈಂ ಮಾಡಿದರೂ ಸಾರ್ವಜನಿಕರು ದೂರು ನೀಡುವ ಮುನ್ನವೇ ಮಂಗಳೂರು ಪೊಲೀಸರು ‘ಸುಮೊಟೋ’ ಕೇಸ್ ದಾಖಲಿಸುತ್ತಿದ್ದಾರೆ. ಇದು ಸಂಘಪರಿವಾರದ ರಕ್ಷಣೆಗಾಗಿಯೇ ಮಂಗಳೂರು ಪೊಲೀಸರು ಕಂಡುಕೊಂಡ ಹೊಸ ತಂತ್ರಗಾರಿಕೆ !
ಅರುಣ್ ಉಲ್ಲಾಳ್ ಎಂಬಾತನು 29.09.2024 ರಂದು ಕಿನ್ಯ ಕೇಶವ ಶಿಶು ಮಂದಿರದಲ್ಲಿ ನಡೆದ ನವದಂಪತಿಗಳ ಸಮಾವೇಶದಲ್ಲಿ ಮಾತನಾಡುತ್ತಾ ” ನಾವು ನಮ್ಮ ಮನೆಯವರು ಮದುವೆಯಾಗುವುದಾದರೆ ಹಿಂದೂ ಹಾಲ್ ಗಳಲ್ಲೇ ಆಗಬೇಕು. ನಮ್ಮ ಮನೆಯ ಪಕ್ಕದಲ್ಲೇ ಕ್ರಿಶ್ಚಿಯನ್ ಸಮುದಾಯದ ಹಾಲ್ ಇದ್ದರೂ ನಾನು ಅದನ್ನು ಬಳಸದೇ ಇಕ್ಕಟ್ಟಾದ ಗಟ್ಟಿ ಸಮುದಾಯದ ಹಾಲ್ ಅನ್ನೇ ಬಳಸಿದೆ. ಯಾಕೆ ಅಂದರೆ ಅದೊಂದು ಸಿದ್ದಾಂತಕ್ಕಾಗಿ…” ಎನ್ನುವ ಮೂಲಕ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಹಾಲ್ ಗಳ ಹೆಸರನ್ನು ಉಲ್ಲೇಖ ಮಾಡಿ ಅದನ್ನು ಬಳಸಕೂಡದು ಎನ್ನುತ್ತಾನೆ. ಆರೋಪಿ ಅರುಣ್ ಉಲ್ಲಾಳ್ ನ ಈ ಮಾತುಗಳು ಜನಾಂಗೀಯ, ಧಾರ್ಮಿಕ ಧ್ವೇಷದಿಂದ ಕೂಡಿದ್ದು ಭಾರತದ ಐಕ್ಯತೆ, ಸಾರ್ವಬೌಮತೆಗೆ ಧಕ್ಕೆಯಾಗುತ್ತದೆ.
“ನಿಮ್ಮ ಮನೆಯ ಮಕ್ಕಳನ್ನು ಹಿಂದೂ ಶಾಲೆಗೆ ಹಾಕಿ” ಎನ್ನುವ ಮೂಲಕ ಕ್ರಿಶ್ಚಿಯನ್,ಮುಸ್ಲಿಂ ಶಾಲೆಗಳ ವಿರುದ್ದ ದ್ವೇಷ ಕಾರುತ್ತಾನೆ. ಸಾರ್ವಜನಿಕರು ಈತ ಮತ್ತು ಸಂಘಟಕರ ಮೇಲೆ ದೂರು ನೀಡಲು ಸಿದ್ದತೆ ನಡೆಸಿರುವಾಗಲೇ ದಿನಾಂಕ 05/10/2024 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂ 118/2024 ಕಲಂ; 66(C) IT ACT AND 196, 351 (BNS), 2023 ರಂತೆ ಪ್ರಕರಣ ದಾಖಲು ಮಾಡಲಾಗಿದೆ.
ಈ ಧ್ವೇಷ ಭಾಷಣ ಘಟನೆಯ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ಟರಿದ್ದಾರೆ. ವೇದಿಕೆಯಲ್ಲಿ ಅವರ ಉಪಸ್ಥಿತಿ ಇದೆ. ಘಟನೆ ನಡೆದಿದ್ದು ಉಲ್ಲಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯದ ಕೇಶವ ಶಿಶುಮಂದಿರಲ್ಲಿ ! ಹಾಗಿದ್ದರೆ ಉಲ್ಲಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮಾಡದೇ ಸೈಬರ್ ಠಾಣೆಯಲ್ಲಿ ಎಫ್ಐಆರ್ ಮಾಡಿದ್ದೇಕೆ ? ಕ್ರೈಂ ನಡೆದ ಘಟನಾ ಸ್ಥಳ ಸಾಮಾಜಿಕ ಜಾಲತಾಣ ಅಲ್ಲ. ಅರುಣ್ ಉಳ್ಳಾಲನು ತನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಿಸುವ ಉದ್ದೇಶಕ್ಕಾಗಿ ಸೃಷ್ಟಿಸಿಕೊಂಡು ಆತನೇ ಅದನ್ನು ಪ್ರಸಾರ ಮಾಡಿಲ್ಲ. ಹಾಗಿರುವಾಗ ಐಟಿ ಅ್ಯಕ್ಟ್ 66 ಹೇಗೆ ಅನ್ವಯವಾಗುತ್ತದೆ ? ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದು ಅರುಣ್ ಉಳ್ಳಾಲ್ ನ ವಿರುದ್ದದ ಟೀಕೆಯೇ ಹೊರತು ಸಮರ್ಥನೆಯಲ್ಲ. ಹಾಗಾಗಿ ಐಟಿ ಅ್ಯಕ್ಟ್ ಗೆ ಸೂಕ್ತ ಪರಿಕರಗಳೂ ಪ್ರಕರಣದಲ್ಲಿ ಇಲ್ಲ. ಅದಲ್ಲದೇ ಘಟನಾ ಸ್ಥಳ ಇರುವಾಗ ಎಫ್ಐಆರ್ ನಲ್ಲಿ ಐಟಿ ಅ್ಯಕ್ಟ್ ಹಾಕುವ ಮೂಲಕ ಆರ್ ಎಸ್ ಎಸ್ ನ ಕೇಂದ್ರವಾಗಿರುವ ಕೇಶವ ಶಿಶುಮಂದಿರವನ್ನೂ, ಕಾರ್ಯಕ್ರಮದ ಸಂಘಟಕರನ್ನೂ ರಕ್ಷಿಸುವ ಹುನ್ನಾರ ಸುಮೊಟೋ ಎಫ್ಐಆರ್ ನಲ್ಲಿದೆ.
‘ವ್ಯಾಪಾರಕ್ಕಾಗಿ ಕೋಮುವಾದ’ ಎನ್ನುವುದು ಬಹಳ ಅಘಾತಕಾರಿಯಾದ ವಿಷಯವಾಗಿದೆ. ಇದು ಸಾಮೂಹಿಕ ಸುಪಾರಿ ಕಿಲ್ಲಿಂಗ್ ನಷ್ಟೇ ಘೋರವಾದ ಅಪರಾಧವಾಗಿದೆ. ವಿಶ್ವಹಿಂದೂಪರಿಷತ್ತಿನ ಎಂ ಬಿ ಪುರಾಣಿಕ್ ನೇತೃತ್ವದ ಶಾರದಾ ಕಾಲೇಜಿಗೆ ವಿದ್ಯಾರ್ಥಿಗಳು ಇಲ್ಲ ಎನ್ನುವ ಕಾರಣಕ್ಕಾಗಿ ಜೈನ ಅಲ್ಪಸಂಖ್ಯಾತರಿಗೆ ಸೇರಿದ ಕಾಲೇಜಿನ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಹಾಲ್ ಗಳನ್ನು ವ್ಯವಹಾರಿಕವಾಗಿಯೂ ಬಳಸದೇ ಹಿಂದೂ ಹಾಲ್ ಗಳನ್ನೇ ಬಳಸಿ ಎನ್ನುವುದಕ್ಕೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಧ್ವೇಷವನ್ನು ಹಬ್ಬಿಸುವುದರ ಕೋಮುಗಲಭೆಯ ಮೂಲಕ ವ್ಯವಹಾರಿಕ ಲಾಭ ಮಾಡುವ ಉದ್ದೇಶವಿದೆ. ಆರೋಪಿ ಡಾ ಅರುಣ್ ಉಳ್ಳಾಲನು ಮೈಕ್ ಮೂಲಕ ಆಂತರಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಅಲ್ಪಸಂಖ್ಯಾತರ ಹಾಲ್, ಶಿಕ್ಷಣ ಸಂಸ್ಥೆಗಳನ್ನು ಬಳಸದಂತೆ ಸೂಚನೆ ನೀಡಿದ್ದಾನೆ. ಈ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತರಿದ್ದು, ಇವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ habitual offender ಆಗಿದ್ದು ಜಾಮೀನಿನ ಮೇರೆಗೆ ಹೊರಗಿದ್ದಾರೆ. ಹಾಗಾಗಿ ಇದು ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್ ವಿರುದ್ದ ನಡೆದ ಸಂಘಟಿತ ಕ್ರಿಮಿನಲ್ ಪಿತೂರಿಯಾಗಿದೆ.
ಹಾಗಾಗಿ ದೇಶದ ಐಕ್ಯತೆ, ಸಾರ್ವಬೌಮತೆ, ಕೋಮು ಸೌಹಾರ್ದತೆಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಡಾ ಅರುಣ್ ಕುಮಾರ್ ಮತ್ತು ಕಾರ್ಯಕ್ರಮದ ವೇದಿಕೆಯಲ್ಲಿದ್ದು ಸಂಘಟಕರಾದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಇತರರ ವಿರುದ್ದ BNS Section 197 (1) (a)(b)(c)(d)(2), 196, 299, 61 ಮತ್ತು ಇತರ ಗಂಭೀರ ಸೆಕ್ಷನ್ ಗಳಡಿಯಲ್ಲಿ ಪೊಲೀಸರು ದೂರು ದಾಖಲಿಸಿ ಕ್ರಮಕೈಗೊಂಡು ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಈಗ ಪೊಲೀಸರು ದಾಖಲಿಸಿರುವ ಸುಮೋಟೋ ಕೇಸ್ ಗೆ ಈ ಸೆಕ್ಷನ್ ಗಳನ್ನು ಸೇರ್ಪಡೆಗೊಳಿಸಬೇಕು. ಐಟಿ ಅ್ಯಕ್ಟ್ 66 ಅನ್ನು ಕೈಬಿಟ್ಟು ಎಫ್ಐಆರ್ ಅನ್ನು ಗಟ್ಟಿಗೊಳಿಸಬೇಕು.
ಇದು ಕೇವಲ ಒಬ್ಬ ಅರುಣ್ ಉಳ್ಳಾಲ್ ಎಂಬಾತನ ಕೃತ್ಯವಲ್ಲ, ಸಂಘಪರಿವಾರದ ಸಂಘಟಿತ ಕೃತ್ಯ ಎಂಬುದನ್ನು ಅರ್ಥ ಮಾಡಿಕೊಂಡು ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಸಂಘಟಕರು ಮತ್ತು ಘಟನಾ ಸ್ಥಳದ ಆರ್ ಎಸ್ ಎಸ್ ಶಿಶುಮಂದಿರವನ್ನು ಆರೋಪಿಯನ್ನಾಗಿಸಬೇಕು. ಇಲ್ಲದೇ ಇದ್ದರೆ ಸುಮೊಟೋ ಎನ್ನುವುದು ಸಂಘಪರಿವಾರದ ರಕ್ಷಣೆಗಾಗಿ ಇರುವ ಪೊಲೀಸರ ತಂತ್ರ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ.
- ಲೇಖಕರು : ನವೀನ್ ಸೂರಿಂಜೆ
Leave a reply