ಕೊಪ್ಪ : ಬಡವರ ಬಂಧು ಸಾಂಸ್ಕೃತಿಕ ವೇದಿಕೆ ಕೊಪ್ಪ ಇವರ ಸಾರಥ್ಯದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಇವರಿಂದ ಕೊಪ್ಪದ ಪುರಸಭಾ ಆವರಣ (ಟೌನ್ ಹಾಲ್) ದಲ್ಲಿ ದಿನಾಂಕ : 02/10/2024ರಂದು ಬುಧವಾರ ಸಂಜೆ 5 ಗಂಟೆಯಿಂದ ದಿ.ಕಾಳಿಂಗ ನಾವಡ ವಿರಚಿತ ನಾಗಶ್ರೀ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಹಾಗೂ ಇದೇ ವೇದಿಕೆಯ ಕಾರ್ಯಕ್ರಮದಲ್ಲಿ 2025ರ “ಕೊಪ್ಪ ಉತ್ಸವ” ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಯ ಸಮಾರಂಭ ನಡೆಯಲಿದೆ ಎಂದು ಬಡವರ ಬಂಧು ಸಾಂಸ್ಕೃತಿಕ ವೇದಿಕೆಯ ಮುಖ್ಯಸ್ಥರು, ಬಡವರ ಬಂಧು ಪತ್ರಿಕೆಯ ಸಂಪಾದಕರಾದ ಸಿದ್ದಿಕ್ ಅವರು “ನುಡಿಕನ್ನಡ” ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗಾನ ಕೋಗಿಲೆ ದಿವಂಗತ ಜಿ.ಆರ್.ಕಾಳಿಂಗ ನಾವಡ ವಿರಚಿತ ಸುಪ್ರಸಿದ್ಧ ಮತ್ತು ಜನಪ್ರಿಯ ಯಕ್ಷಗಾನ ಪ್ರಸಂಗ “ನಾಗಶ್ರೀ” ಯನ್ನು ಕೊಪ್ಪದ ಪುರಭವನದಲ್ಲಿ ಸಜ್ಜುಗೊಂಡಿರುವ ವಿದ್ಯುತ್ ದೀಪಾಲಂಕೃತ ಭವ್ಯ ರಂಗ ಮಂಟಪದಲ್ಲಿ ಈ ಕಾಲದ ಕಾಳಿಂಗ ನಾವಡರೆಂದೇ ಖ್ಯಾತಿ ಪಡೆದಿರುವ ಜನ್ಸಾಲೆ ರಾಘವೇಂದ್ರಾಚಾರ್ಯರ ಭಾಗವತಿಕೆಯಲ್ಲಿ ಈ ಪ್ರಸಂಗ ಮೂಡಿ ಬರಲಿದೆ.
ಹಿಮ್ಮೇಳದಲ್ಲಿ ಮದ್ದಳೆ – ಶ್ರೀ ಸುನಿಲ್ ಕುಮಾರ್ ಬಂಡಾರಿ ಕಡತೋಕ, ಚಂಡೆ – ಶ್ರೀ ಸುಜನ್ ಹಾಲಾಡಿ, ಮುಮ್ಮೇಳದಲ್ಲಿ ಖ್ಯಾತ ಯಕ್ಷಗಾನ ಕಲಾವಿದರುಗಳಾದ ಉದಯ್ ಹೆಗ್ಡೆ ಕಡಬಾಳ, ವಿನಯ್ ಬೋರೊಳ್ಳಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ (ಸ್ತ್ರೀ ಪಾತ್ರ) ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪುರೂ (ಸ್ತ್ರೀ ಪಾತ್ರ), ರವೀಂದ ದೇವಾಡಿಗ, ನಿರಂಜನ ಜಾಗನಳ್ಳಿ, ಪವನ್ ಹೆಗ್ಡೆ ಸಾಣ್ಮನೆ, ಪುರಂದರ ಮೂಡ್ಕಾಣೆ (ಹಾಸ್ಯ ಪಾತ್ರ) ಸಂತೋಷ್ ಕುಲಾಲ್ ಇತ್ಯಾದಿ ಕಲಾವಿದರು ನಾಗಶ್ರೀ ಯಕ್ಷಗಾನ ಪ್ರಸಂಗದ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಎಲ್ಲಾ ಕಲಾಭಿಮಾನಿಗಳು ಯಕ್ಷಗಾನ ಪ್ರೇಮಿಗಳು, ಕಲಾರಸಿಕರು ಸಂಭ್ರಮದ ನವರಾತ್ರಿ ಆರಂಭದ ಹೊಸ್ತಿಲಲ್ಲಿ ಕೊಪ್ಪದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಆಗಮಿಸಿ ಆಯೋಜಕರನ್ನು, ಕಲಾವಿದರನ್ನು, ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಬಡವರ ಬಂಧು ಸಾಂಸ್ಕೃತಿಕ ವೇದಿಕೆ ಎಲ್ಲರನ್ನೂ ಆಹ್ವಾನಿಸಿದೆ.

Leave a reply