ಕಠ್ಮಂಡು : ನೇಪಾಳ ಪ್ರವಾಹಕ್ಕೆ ಸಿಲುಕಿದೆ. ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಭಾರಿ ಸಾವು ನೋವು ಸಂಭವಿಸಿದೆ. ಸುಮಾರು 200 ಮಂದಿ ಜನರು ಸಾವನ್ನಪ್ಪಿದ್ದಾರೆ. ಮತ್ತು ಕನಿಷ್ಠ 30 ಜನರು ಕಾಣೆಯಾಗಿದ್ದಾರೆ. ರಕ್ಷಣಾ ತಂಡಗಳು ಸೋಮವಾರ ಸತತ ಮೂರನೇ ದಿನವೂ ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ಮುಂದುವರಿಸಿವೆ.
ಏತನ್ಮಧ್ಯೆ, ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 192 ಮಂದಿ ಜನರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ರಿಷಿರಾಮ್ ತಿವಾರಿ ಹೇಳಿದ್ದಾರೆ. ಅಲ್ಲದೆ 194 ಮಂದಿ ಗಾಯಗೊಂಡಿದ್ದಾರೆ. ಈ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ನೇಪಾಳ ಪ್ರಧಾನಿ ಪ್ರಕಾಶ್ ಮಾನ್ಸಿಂಗ್ ಅವರು ಭಾನುವಾರ ಸಿಂಘಾ ದರ್ಬಾರ್ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಬೇಕೆಂದು ಸರ್ವಪಕ್ಷ ಸಭೆ ನಿರ್ಧರಿಸಿತು.
ಗೃಹ ಸಚಿವಾಲಯದ ಪ್ರಕಾರ, ನೇಪಾಳ ಸೇನೆಯ ಒಟ್ಟು 4,500 ಸಿಬ್ಬಂದಿ, ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭಾರತದಿಂದ ತರಕಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ, ಅಲ್ಲಿನ ಮಾರುಕಟ್ಟೆಯಲ್ಲಿ ಅವುಗಳ ಬೆಲೆಗಳು ಅಪಾರವಾಗಿ ಹೆಚ್ಚಾಗಿದೆ. ದೇಶಾದ್ಯಂತ ಹಲವು ರಾಷ್ಟ್ರೀಯ ಹೆದ್ದಾರಿಗಳು ತೀವ್ರವಾಗಿ ಹಾನಿಗೊಳಗಾಗಿದೆ. ರಸ್ತೆಗಳು, ನೂರಾರು ಮನೆಗಳು ಮತ್ತು ಸೇತುವೆಗಳು ನಾಶವಾಗಿವೆ. ನೂರಾರು ಕುಟುಂಬಗಳು ಸ್ಥಳಾಂತರಗೊಂಡಿವೆ.
ನೇಪಾಳದ ರಾಜಧಾನಿ ಕಠ್ಮಂಡುವಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು ಎಂದು ‘ಕಠ್ಮಂಡು ಪೋಸ್ಟ್’ ಎಂಬ ವಾರ್ತಾ ಪತ್ರಿಕೆ ವರದಿ ಮಾಡಿದೆ. ಸಾರಿಗೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿ ತಿವಾರಿ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 1100 ಮೆಗಾವ್ಯಾಟ್ ಸಾಮರ್ಥ್ಯದ ಕನಿಷ್ಠ 20 ಜಲವಿದ್ಯುತ್ ಕೇಂದ್ರಗಳು ಹಾನಿಗೊಳಗಾಗಿವೆ. ಇದರಿಂದ ಕಠ್ಮಂಡು ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಏಷ್ಯಾದಲ್ಲಿನ ಹವಾಮಾನ ಬದಲಾವಣೆಯೇ ಹೆಚ್ಚಿನ ಮಳೆಗೆ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
Leave a reply