ಬೆಂಗಳೂರು : ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಅಕ್ರಮ ಎಸಗಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರರ ವಿರುದ್ಧ ಕರ್ನಾಟಕದ ತಿಲಕನಗರ ಪೊಲೀಸರು ಶನಿವಾರ ಎಫ್ಐಆರ್ ದಾಖಲಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಮತ್ತು ಇತರೆ ಬಿಜೆಪಿ ನಾಯಕರು ಚುನಾವಣಾ ಬಾಂಡ್ಗಳ ಹೆಸರಿನಲ್ಲಿ ಅನೇಕ ಕೈಗಾರಿಕೋದ್ಯಮಿಗಳು ಮತ್ತು ಇತರೆ ಸೆಲೆಬ್ರಿಟಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ತಿನ ಆದರ್ಶ್ ಆರ್ ಅಯ್ಯರ್ ಈ ವರ್ಷದ ಮಾರ್ಚ್ 30ರಂದು ತಿಲಕನಗರ ಪೊಲೀಸರನ್ನು ಮೊದಲ ಬಾರಿಗೆ ಸಂಪರ್ಕಿಸಿದರು.
ಅವರು ಸ್ಪಂದಿಸದ ಕಾರಣ ಬೆಂಗಳೂರು ಆಗ್ನೇಯ ಡಿಸಿಪಿ ಅವರನ್ನು ಸಂಪರ್ಕಿಸಿದರು. ಆದರೆ, ಯಾವುದೇ ಪ್ರಯೋಜನವಾಗದೆ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಿಗಾಗಿ ಸ್ಥಾಪಿಸಲಾದ ಕರ್ನಾಟಕದ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂತೋಷ್ ಗಜಾನನ ಹೆಗ್ಡೆ, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಶುಕ್ರವಾರ ಪೊಲೀಸರಿಗೆ ಆದೇಶಿಸಿದ್ದಾರೆ. ಮುಂದಿನ ವಿಚಾರಣೆ ಅಕ್ಟೋಬರ್ 10 ರಂದು ನಡೆಯಲಿದೆ.
ವಿಶೇಷ ನ್ಯಾಯಾಂಗ ಪೀಠದ ಆದೇಶದಂತೆ ಬಿಜೆಪಿಯ ಕರ್ನಾಟಕ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಹಿರಿಯ ನಾಯಕರಾದ ನಳೀನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯ (ಇಡಿ), ಜೆಪಿ ನಡ್ಡಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚುನಾವಣಾ ಬಾಂಡ್ಗಳ ನೆಪದಲ್ಲಿ ಆರೋಪಿಗಳು ₹.8 ಸಾವಿರ ಕೋಟಿಗೂ ಹೆಚ್ಚು ಲಾಭ ಪಡೆದಿದ್ದಾರೆ ಎಂದು ಆದರ್ಶ್ ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಹಲವಾರು ಕಾರ್ಪೊರೇಟ್ಗಳು, ಸಿಇಒಗಳು, ಎಂಡಿಗಳು ಮತ್ತು ಆಯಾ ಕಂಪನಿಗಳ ಉನ್ನತ ಅಧಿಕಾರಿಗಳನ್ನು ದಾಳಿ ಮಾಡಲು, ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಬಂಧಿಸಲು ಇಡಿಯನ್ನು ಸಾಧನವಾಗಿ ಬಳಸಿಕೊಂಡಿದ್ದಾರೆ ಎಂದು ದೂರುದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ದಾಳಿಗೆ ಹೆದರಿ ಅನೇಕ ಕಾರ್ಪೊರೇಟ್ಗಳು ಕೋಟಿಗಟ್ಟಲೆ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಬೇಕಾಯಿತು ಎಂದು ನಡ್ಡಾ, ಕಟೀಲ್ ವಿಜಯೇಂದ್ರ ಮತ್ತು ಇತರರು ಅದನ್ನು ಲಾಭ ಮಾಡಿಕೊಂಡರೆಂದು ಹೇಳಿದರು.
Leave a reply