ಕೊಲಂಬೊ : ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ (54) ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ನಂತರ 24 ವರ್ಷಗಳ ಸುದೀರ್ಘ ಅಂತರದ ನಂತರ ಮಹಿಳೆಯೊಬ್ಬರು ಮತ್ತೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ನಂತರ ತಕ್ಷಣವೇ ರಾಜೀನಾಮೆ ನೀಡಿದ ಪ್ರಧಾನಿ ದಿನೇಶ್ ಗುಣವರ್ಧನೆ ಅವರ ಸ್ಥಾನದಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ಪಕ್ಷದ ನಾಯಕಿ ಹರಿಣಿ ಅವರಿಗೆ ಅಧ್ಯಕ್ಷ ಡಿಸಾನಾಯಕೆ ಪ್ರಮಾಣ ವಚನ ಬೋಧಿಸಿದರು.
ಇವರೊಂದಿಗೆ ಇತರೆ ಮೂವರನ್ನು ಸಂಪುಟ ಸಚಿವರನ್ನಾಗಿ ನೇಮಿಸಲಾಯಿತು. ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆಯಂತಹ ಇಲಾಖೆಗಳನ್ನು ಪ್ರಧಾನಿಯವರಿಗೆ ವಹಿಸಲಾಗಿದೆ. ಹಕ್ಕುಗಳ ಕಾರ್ಯಕರ್ತ ಮತ್ತು ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ಅಮರಸೂರ್ಯ ಅವರು ದೇಶದ 16 ನೇ ಪ್ರಧಾನಿ ಮತ್ತು ದೇಶದ ಇತಿಹಾಸದಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾದರು.
ಎನ್ಪಿಪಿ ಸಂಸದರಾದ ವಿಜಿತಾ ಹೀರತ್ ಮತ್ತು ಲಕ್ಷ್ಮಣ್ ನಿಪುನರಾಚಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ತಾತ್ಕಾಲಿಕವಾಗಿ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಂಸತ್ತನ್ನು ವಿಸರ್ಜಿಸಿ ತಕ್ಷಣವೇ ಚುನಾವಣೆ ನಡೆಸಲಾಗುವುದು. ನವೆಂಬರ್ ಅಂತ್ಯದಲ್ಲಿ ಚುನಾವಣೆ ನಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, 15 ಪ್ರಮುಖ ಸಚಿವಾಲಯಗಳಿಗೆ ಹೊಸ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಅವರಲ್ಲಿ ಪ್ರಧಾನ ಮಂತ್ರಿಗಳ ಕಾರ್ಯದರ್ಶಿಯಾಗಿ ಜಿಪಿ ಸಪುತಂತ್ರಿ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಡಬ್ಲ್ಯುಎಂಡಿಜೆ ಫೆರ್ನಾಂಡೋ ಸೇರಿದ್ದಾರೆ. ಮಾಜಿ ಅಧ್ಯಕ್ಷ ಯುಎನ್ಪಿ ನಾಯಕ ರನಿಲ್ ವಿಕ್ರಮ ಸಿಂಘೆ ಮುಂದಿನ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆ ಪಕ್ಷದ ಉಪ ನಾಯಕ ರುವಾಸ್ ಜಯವರ್ಧನೆ ಹೇಳಿಕೆ ನೀಡಿದ್ದಾರೆ.
Leave a reply