ಕೊಪ್ಪ : ಕೊಪ್ಪ ತಾಲ್ಲೂಕಿನ ಮರಿತೊಟ್ಲು ಗ್ರಾಮದ ಅಂದಗಾರು ಗ್ರಾಮ ಪಂಚಾಯತಿಯಲ್ಲಿ ಗುರುವಾರದಂದು ಕಸ್ತೂರಿ ರಂಗನ್ ವರದಿ ಕುರಿತು ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರೆಲ್ಲರೂ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಹಾಗೂ ಜೀವ ವೈವಿಧ್ಯತೆಯಲ್ಲಿ ಮನುಷ್ಯರನ್ನು ಕೂಡಾ ಒಂದು ಜೀವಿ ಎಂದು ಗುರುತಿಸದಿರುವ ಕಸ್ತೂರಿ ರಂಗನ್ ವರದಿ ಮಲೆನಾಡಿಗರ ಪಾಲಿಗೆ ಅವೈಜ್ಞಾನಿಕ ಹಾಗೂ ಮಾರಕವಾಗಿದೆಯಾದ್ದರಿಂದ ಅದು ರದ್ದಾಗಬೇಕೆಂದು ಆಗ್ರಹಿಸಿದರು. ಆಕ್ಷೇಪಣೆಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ.
1)ಕಸ್ತೂರಿ ರಂಗನ್ ಸಮಿತಿ ಸ್ಥಳೀಯರ ಗಮನಕ್ಕೆ ತರದೇ, ಸ್ಥಳೀಯರ ಒಪ್ಪಿಗೆಯನ್ನು ಪಡೆಯದೆ ಅವೈಜ್ಞಾನಿಕವಾಗಿ ಅದ್ಯಯನ ನಡೆಸಿದೆ. 2) ಈಗಾಗಲೇ ಇಲ್ಲಿನ ನಿವಾಸಿಗಳು ವಾಸದ ಮನೆಯ ನಿವೇಶನಕ್ಕೆ 94ಸಿ ಹಾಗೂ 94 ಸಿಸಿ ಅಡಿಯಲ್ಲಿ ಸಾಗುವಳಿ ಮಾಡಿಕೊಂಡ ರೈತರು ಪಾರಂಪರಿಕ ಅರಣ್ಯ ಹಕ್ಕು ಫಾರಂ ನಂಬರ್ 50, 53, 57 ಅಡಿಯಲ್ಲಿ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಇನ್ನೂ ಇಲ್ಲಿನ ನಿವಾಸಿಗಳಿಗೆ, ರೈತರಿಗೆ ಹಕ್ಕು ಪತ್ರ ನೀಡದೆ, ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಮುಂದಾಗಿದೆ. 3)ಇಲ್ಲಿನ ವಾಸಿಗಳಿಗೆ ರಸ್ತೆ, ಕುಡಿಯುವ ನೀರು, ಶಾಲೆ, ಉದ್ಯೋಗ ಮತ್ತು ಆರೋಗ್ಯ ಇತರೆ ಮೂಲಭೂತ ಸೌಕರ್ಯಗಳ ಅವಶ್ಯಕತೆಗಳನ್ನು ಪೂರೈಕೆ ಮಾಡದಿರುವುದು. 4)ಸದರಿ ವರದಿಯನ್ನು ಭೌತಿಕ ಸರ್ವೆ ಮಾಡದೆ ಮಾಡಿರುವುದು, ಜನಾಭಿಪ್ರಾಯ ಸಂಗ್ರಹಣೆ ಮಾಡದಿರುವುದು. 5)ಜೀವ ವೈವಿಧ್ಯತೆಯಲ್ಲಿ ಮನುಷ್ಯರನ್ನು ಒಂದು ಜೀವಿ ಎಂದು ಪರಿಗಣಿಸದಿರುವುದು. ಅದರಿಂದಾಗಿ ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಾದ ಭಾರತದ ಯಾವುದೇ ಭಾಗದಲ್ಲಿ ವಾಸಿಸುವ, ಸ್ವಾತಂತ್ರ್ಯವಾಗಿ ಬದುಕುವ, ತನ್ನ ಇಚ್ಚೆಯ ಉದ್ಯೋಗ/ವ್ಯವಹಾರ ಮಾಡುವ ಹಕ್ಕುಗಳ ಉಲ್ಲಂಘನೆಯಾಗಿದೆ. 6) ಅಭಯಾರಣ್ಯದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರು ಸಂಕಷ್ಟಕ್ಕೊಳಗಾಗಿರುವುದು ನಮ್ಮ ಕಣ್ಮುಂದೆ ಇದೆಯಾದ್ದರಿಂದ, ಪರಿಸರ ಸೂಕ್ಷ್ಮ ವಲಯ ಘೋಷಣೆ ಮಾಡಿದರೆ, ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಜೀವನ ಮಾಡುವುದು ಕಷ್ಟವಾಗುತ್ತದೆಯಾದ್ದರಿಂದ. 7) ಇಲ್ಲಿನ ಕೃಷಿ ಪದ್ದತಿಯನ್ನು ಗಣನೆಗೆ ತೆಗೆದುಕೊಳ್ಳದೆ, ಕೃಷಿ ಪದ್ದತಿಗೆ ವರದಿಯಲ್ಲಿ ನಿರ್ಬಂಧ ಹೇರಲಾಗಿಯಾದ್ದರಿಂದ. 8) ಸದರಿ ವರದಿಯಲ್ಲಿ ನಮ್ಮ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದು, ಅಕ್ಷಾಂಶ ರೇಖಾಂಶ ಅಡಿಯಲ್ಲಿ ಸೇರಿಸಿದ್ದು, ನಿರ್ದಿಷ್ಟ ಸರ್ವೆ ನಂಬರ್ ಆಗಲಿ, ಜನವಸತಿ ಮತ್ತು ಸಾಗುವಳಿ ಭೂಮಿಯನ್ನು ಸೇರಿಸದಿರುವುದು. 9) ಪಶ್ಚಿಮಘಟ್ಟಗಳ ಉಳಿವಿಗೆ ಸದರಿ ತೆಗೆದುಕೊಂಡಿರುವ ಕ್ರಮ ಜನವಿರೋಧಿಯಾಗಿದ್ದು ಇದನ್ನು ಸ್ಥಳೀಯ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ವರದಿ ತಯಾರಿ ಮಾಡಬೇಕು. 10) ಈಗಾಗಲೇ ಡೀಮ್ಡ್ ಫಾರೆಸ್ಟ್ ಸೆಕ್ಷನ್ 4, ಸೆಕ್ಷನ್ 17 ಮೀಸಲು ಅರಣ್ಯ, ಸೊಪ್ಪಿನ ಬೆಟ್ಟ, ಕಂದಾಯ ಇಲಾಖೆಯ ಭೂಮಿ ನಿರ್ದಿಷ್ಟ ಗಡಿಯಿಲ್ಲದ ಕಾನೂನುಗಳ ಗೊಂದಲ ಜನರಿಗೆ ಮಾರಕವಾಗಿದೆ. ಇದನ್ನು ಪರಿಹರಿಸದೇ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲು ಹೊರಟಿರುವುದು. ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಜನರಿಗೆ ಮಾರಕ ಎಂದು ಗ್ರಾಮದ ಜನರೆಲ್ಲರೂ ಒಕ್ಕೊರಲಿನಿಂದ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದರು.
ಸೋಮ್ಲಾಪುರ, ತನೂಡಿ, ಮರಿತೊಟ್ಲು ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದ ಈ ವಿಶೇಷ ಗ್ರಾಮಸಭೆಯಲ್ಲಿ ಈ ಮೂರು ಗ್ರಾಮಗಳ ಜನರು ಪಾಲ್ಗೊಂಡಿದ್ದರು. ಈ ಸಭೆ ಗ್ರಾಮ ಪಂಚಾಯತಿ PDO ಹಾಗೂ ಅಧ್ಯಕ್ಷರಾದ ಸವಿತಾ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯರುಗಳು ಪಾಲ್ಗೊಂಡಿದ್ದರು. ಪರಿಸರ ಮತ್ತು ಜನಪರ ಹೋರಾಟಗಾರರಾದ ನೀಲಗುಳಿ ಪದ್ಮನಾಭ ಅವರು ಮಾತನಾಡಿ.. ಮಲೆನಾಡಿನ ಮಣ್ಣಿನ ಮಕ್ಕಳಾದ ನಾವು ಪಾರಂಪರ್ಯವಾಗಿ ಪರಿಸರವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದೇವೆ. ರೈತರಲ್ಲಿ “ಜಲ ಮೂಲ ಋಷಿ ಮೂಲವನ್ನು ಪತ್ತೆ ಮಾಡಬಾರದು” ಎಂಬ ಗಾಧೆಯೇ ಇದೆ. ಸಾವಿರಾರು ವರ್ಷಗಳಿಂದ ಜನರು ವಾಸವಿದ್ದಾರೆ ಮಲೆನಾಡಿನ ಪರಿಸರಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಸರ್ಕಾರ ಮತ್ತು ಅರಣ್ಯ ಇಲಾಖೆಯ ಯೋಜನೆಗಳಿಂದ ಪರಿಸರಕ್ಕೆ ಗಂಭೀರವಾಗಿ ಹಾನಿಯಾಗಿದೆ ಎಂದರು. ಪರಿಸರದ ಸೂಕ್ಷ್ಮತೆಯನ್ನು ಹಾಳು ಮಾಡಿದವರಾರು? ಹಿಂದೆಂದೂ ಆಗದಷ್ಟು ಧಕ್ಕೆ ಈಗೇಕೆ ಆಗಿದೆ? ಬಹುರಾಷ್ಟ್ರೀಯ ಕಂಪನಿಗಳ ಲೂಟಿಗಾಗಿ, ಅಧ್ಯಯನಗಳು, ಯೋಜನೆಗಳನ್ನು ತರಲಾಗಿದೆ. 2010 ರಿಂದ ಒಂದು ಸಾವಿರ ಜೆಸಿಬಿಗಳು ಸೂಕ್ಷ್ಮ ವಲಯಗಳಲ್ಲಿ ಸಂಚಾರ ಮಾಡಿವೆ. ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಟ್ರಂಚಿ, ಇಂಗುಗುಂಡಿಗಳನ್ನು ಕಡಿದಿವೆ. ಇದು ಅತಿಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮಾಡಬಹುದು. ಆದರೆ ಪ್ರತಿ ವರ್ಷ 120, 155 ಸೆಂಟಿಮೀಟರ್ ಮಳೆ ಬೀಳುವ ಪ್ರದೇಶಗಳಲ್ಲಿ ಇದರ ಅಗತ್ಯವಿಲ್ಲ. ಮಲೆನಾಡಿನ ಪರಿಸರದಲ್ಲಿ ಟ್ರೆಂಚಿ ಕಡಿಯುವುದು ಇಂಗು ಗುಂಡಿಗಳನ್ನು ಮಾಡುವುದರಿಂದ ಮಳೆಗಾಲದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಪರಿಸರಕ್ಕೆ ಗಂಭೀರವಾಗಿ ಹಾನಿಯಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆ ಅಕೇಶಿಯ ಗಿಡಗಳನ್ನು ನೆಟ್ಟು ಪರಿಸರವನ್ನು ನಾಶಮಾಡಿದೆ. ಇದರಿಂದಾಗಿ ಜೀವ ವೈವಿಧ್ಯತೆಗೆ ಗಂಭೀರವಾಗಿ ಹಾನಿಯಾಗಿದೆ ಎಂದರು. ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಒಳಗೊಂಡಿರುವ ಕಸ್ತೂರಿ ರಂಗನ್ ವರದಿ ರದ್ದಾಗಬೇಕು ಎಂದರು.
ಮಾಜಿ ಪಂಚಾಯತಿ ಸದಸ್ಯರುಗಳಾದ ಶೇಷಪ್ಪ, ಬಾಬುಕುಂಡಾ ಅವರು, ಹೆಚ್.ಎಸ್.ರತ್ಮಾಕರ, ಸುಧಕರ್.ಹೆಚ್.ಆರ್, ಮತಿತರರು ಯೋಜನೆಯನ್ನು ವಿರೋಧಿಸಿ ಮಾತನಾಡಿದರು.


Leave a reply