ನ್ಯೂಡೆಲ್ಲಿ : ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಪ್ರವಾಹದಿಂದ ಜಲಾವೃತವಾಗಿದೆ. ತಾಜ್ ಮಹಲ್ನ ಮುಖ್ಯ ಗುಮ್ಮಟವೂ ಸೋರಿಕೆಯಾಗುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದೆಹಲಿಯಿಂದ 250 ಕಿ.ಮೀ ದೂರದಲ್ಲಿರುವ ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ 17 ನೇ ಶತಮಾನದ ಅದ್ಭುತ, ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಪ್ರವಾಹದ ನೀರೆಲ್ಲಾ ತಾಜ್ ಮಹಲ್ ಆವರಣದ ಉದ್ಯಾನದಲ್ಲಿ ನಿಂತಿದೆ.
ಅದು ಚಿಕ್ಕ ಕೊಳದಂತೆ ಗೋಚರಿಸುತ್ತಿದೆ. ಮುಖ್ಯ ಗುಮ್ಮಟದ ಮೇಲೆ ನೀರು ಸೋರಿಕೆಯಾಗಿದ್ದರೂ, ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಕದ ಉದ್ಯಾನ ನೀರಿನಲ್ಲಿ ಮುಳುಗಿದ್ದರೂ ತಾಜ್ ಮಹಲ್ ಅಡಿಪಾಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ರಚನೆಯನ್ನು ಪರಿಶೀಲಿಸಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗಿದೆ ಎಂದು ಆಗ್ರಾ ಸರ್ಕಲ್ ಆರ್ಕಿಯಾಲಜಿ ಅಧಿಕಾರಿ ರಾಜ್ಕುಮಾರ್ ಪಟೇಲ್ ಹೇಳಿದ್ದಾರೆ.
ತಾಜ್ ಮಹಲ್ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯಾಗುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ನಿರಂತರ ಮಳೆಯಿಂದಾಗಿ ತಾಜ್ ಮಹಲ್ ಗೋಡೆಗಳು ನೀರಿನಿಂದ ಆವೃತವಾಗಿವೆ. ಇದರಿಂದಾಗಿಯೇ ಸೋರಿಕೆ ಉಂಟಾಗಿರುವುದನ್ನು ಗುರುತಿಸಿದ್ದೇವೆ. ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ. ಡ್ರೋನ್ ಕ್ಯಾಮೆರಾ ಬಳಸಿ ತಪಾಸಣೆ ನಡೆಸಿದ್ದೇವೆ ಎಂದು ರಾಜ್ಕುಮಾರ್ ಹೇಳಿದ್ದಾರೆ.
ಬಿರುಕು ಬಿಟ್ಟಿರುವ ಗುಮ್ಮಟದ ಮೇಲೆ ನೀರು ಶೇಖರಣೆಯಾಗುತ್ತದೆ ಎಂದು ಇದಕ್ಕೂ ಮುನ್ನ ಅಧಿಕಾರಿಯೊಬ್ಬರು ತಿಳಿಸಿದರು. ತಾಜ್ ಮಹಲ್ ಸೋರಿಕೆ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಸ್ಥಳೀಯರು ವೀಡಿಯೋ ತೆಗೆದು ಹೊರಭಾಗದ ಉದ್ಯಾನ ನೀರಿನಲ್ಲಿ ಮುಳುಗಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಪ್ರಸಿದ್ಧ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಬೇಕೆಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Leave a reply