(ಇಂದಿಗೆ ಕ್ರಾಂತಿಕಾರಿ ಯುವ ವಿದ್ವಾಂಸ, ಹೋರಾಟಗಾರ ಉಮರ್ ಖಲೀದ್ ವಿನಾಕಾರಣ ಬಂಧನಕ್ಕೋಳಗಾಗಿ, ಜಾಮೀನಿಲ್ಲದೆ, ವಿಚಾರಣೆ ಇಲ್ಲದೆ ಜೈಲು ಪಾಲಾಗಿ ನಾಲ್ಕು ವರ್ಷಗಳಾದವು…)
ಬೆಳಕನ್ನು ಬಂಧಿಸಿದರೆ
ಹಗಲಾಗದೆನ್ನುವ
ಇರುಳ ಪಹರಿಗಳೇ ಕೇಳಿ
ಉಮರ್ ಖಲೀದ್ ಎಂದರೆ
ಕತ್ತಲ ಅಗಸವ ಬೆಳಗುವ
ಭರವಸೆಯ ನಕ್ಷತ್ರ
ಸಾವಿನಂತ ನೋವುಣ್ಣುತ್ತಲೇ
ಜೀವ ಪೊರೆವ ತಾಯ
ಹೆರಿಗೆ ಮುಕ್ಕು ..
ಹೊರಗಿನ ಕತ್ತಲು
ಒಳಗಿಳಿಯದಂತೆ ಕಾಯ್ವ
ಬದ್ಧತೆಯ ಹಣತೆ
ಸುಳ್ಳುಗಳ ಅತಿಕ್ರಮಣ
ತಡೆವ
ಸತ್ಯದ ಗಡಿರೇಖೆ…
ಅದಕೆಂದೆ..
ಉಮರ್ ಖಾಲಿದ್ ನನ್ನು
ನೆನಯುವುದೆಂದರೆ
ಮರೆವಿನ ವಿರುದ್ಧ
ನೆನಪಿನ ಯುದ್ಧದ ಮುಂದುವರಿಕೆ..
ಸಂಘಟಿತ ದ್ವೇಷದ
ವಿರುದ್ಧ
ಪ್ರೀತಿಯ ಹಪಾಹಪಿಕೆ..
ಅಸಹಾಯಕತೆ, ಹತಾಷೆ,
ಬ್ರಾಂತಿಗಳ ವಿರುದ್ಧ…
ನೈತಿಕ ಎಚ್ಚರದ ಕಾಣ್ಕೆ ..
ಹೌದು
ಉಮರ್ ಖಾಲಿದ್
ಸುಳ್ಳಿನ ಸಾಮ್ರಾಜ್ಯಕೆ
ಸಡ್ಡು ಹೊಡೆದ
ಭಯೋತ್ಪಾದಕ…
ದ್ವೇಷದ ಕೋಟೆಯಲ್ಲಿ
ಪ್ರೀತಿಯ ಸ್ಪೋಟಕ
ಅಡಗಿಸಿಟ್ಟ ದ್ವೇಷದ್ರೋಹಿ…
ಸುಳ್ಳಿನ ಸಂದೂಕದಲ್ಲಿ
ಸತ್ಯದ ಕಿಡಿಯನ್ನು ಬಚ್ಚಿಟ್ಟ
ವಿಫಲ ಸಂಚುಕೋರ..
ಇರುಳ ದೊರೆಗಳೇ…
ಇಗೋ ಬರೆದುಕೊಳ್ಳಿ
ನನ್ನ ಹೆಸರನ್ನೂ..
ಉಮರನ ಪಕ್ಕದಲ್ಲಿ
ಭಯೋತ್ಪಾದಕರ ಪಟ್ಟಿಯಲ್ಲಿ
ನನ್ನ ಹೆಸರು ಸುಂದರ ಸತ್ಯ
ನಾನು ಉಮರನ ಒಕ್ಕಲು
ವಿಳಾಸ ವಿಶಾಲ ಬಯಲು…
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply