ಬೆಂಗಳೂರು : ಕರ್ನಾಟಕದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ನಿರ್ವಹಣೆಗೆ ಮೀಸಲಿಟ್ಟ ರೂ.1,120 ಕೋಟಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಕನ್ಹಾ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಉನ್ನತಾಧಿಕಾರಿಗಳ ಕಮಿಟಿ
ನ್ಯಾಯಮೂರ್ತಿ ಜಾನ್ ಮೈಕಲ್ ಆಯೋಗ ಸಲ್ಲಿಸಿರುವ ವರದಿಯನ್ನು ಅಧ್ಯಯನ ಮಾಡಿ ಮುಂದಿನ ಕ್ರಮಕ್ಕೆ ಸೂಚಿಸಲು ಕರ್ನಾಟಕ ಸರ್ಕಾರ ಉನ್ನತ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಗಡುವು ನೀಡಿದೆ. ಮತ್ತೊಂದೆಡೆ, ನ್ಯಾಯಮೂರ್ತಿ ಜಾನ್ ಮೈಕೆಲ್ ಆಯೋಗವು ಈ ವಿಷಯದ ಬಗ್ಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಕಾಲ ಗಡುವನ್ನು ವಿಸ್ತರಿಸಿದೆ.
ಆರೋಪಗಳೇನು?
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೊದಲ ಲಾಕ್ಡೌನ್ ವಿಧಿಸಿದಾಗ ಮಾರ್ಚ್ 2020 ರಿಂದ ಡಿಸೆಂಬರ್ 31, 2022 ರವರೆಗೆ ಕೋವಿಡ್ ನಿರ್ವಹಣೆಗೆ ಖರ್ಚು ಮಾಡಿದ ₹ 7,223 ಕೋಟಿ ರೂ. ನಿಧಿಯಲ್ಲಿ ₹ 1,120 ಕೋಟಿ ದುರ್ಬಳಕೆಯಾಗಿದೆ ಎಂದು ಸಿದ್ದರಾಮಯ್ಯ ನೇಮಿಸಿದ್ದ ಜಾನ್ ಮೈಕಲ್ ಆಯೋಗ ಹೇಳಿದೆ. ಮುಡಾ ಹಗರಣಕ್ಕೆ ಪ್ರತಿಯಾಗಿ ಸಿದ್ದು ಸರ್ಕಾರ ಇದನ್ನು ಮುನ್ನೆಲೆಗೆ ತಂದಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ನನ್ನ ಭದ್ರತೆಗೆ ಕಂಟಕವಿದೆ : ಕರ್ನಾಟಕ ರಾಜ್ಯಪಾಲ
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ವರ್ತನೆಯಿಂದ ತಮ್ಮ ಭದ್ರತೆಗೆ ಕಂಟಕ ಎದುರಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಅವರು ನೀಡಿರುವ ಅನುಮತಿ ರಾಜಕೀಯ ಪಕ್ಷಪಾತದಿಂದ ಕೂಡಿದೆಯೆಂದು ಭಾವಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯದ ಕೆಲವು ಸಚಿವರು ಮತ್ತು ಮುಖಂಡರು ಉದ್ದೇಶಪೂರ್ವಕವಾಗಿ ಗೋ ಬ್ಯಾಕ್ ಗವರ್ನರ್ ಚಳವಳಿ ಆರಂಭಿಸಿದ್ದಾರೆ ಎಂದರು.
Leave a reply