ಸ್ಪಷ್ಟವಾಗಿ ಹೇಳುವುದಾದರೆ, ನಿಜಕ್ಕೂ ದೇವರು ಇಲ್ಲ. ಈ ವಿಶ್ವವನ್ನು ಯಾರೂ ಸೃಷ್ಟಿಸಿಲ್ಲ. ನಾನು ದೃಢವಾಗಿ ನಂಬುವುದೇನೆಂದರೆ.. ಸ್ವರ್ಗ, ನರಕಗಳಿಲ್ಲ. ಮರಣಾನಂತರದ ಜೀವನವೂ ಇಲ್ಲ. ಅದ್ಭುತವಾದ ಈ ಬ್ರಹ್ಮಾಂಡದ ರಹಸ್ಯಗಳನ್ನು ತಿಳಿದುಕೊಳ್ಳಲು ನಮಗಿರುವುದು ಒಂದೇ ಒಂದು ಜೀವನ ಮಾತ್ರವೇ”! ಎಂದು ಗಟ್ಟಿಯಾಗಿ ಹೇಳಿದ ಡಾ.ಸ್ಟೀಫನ್ ಹಾಕಿಂಗ್ ಆ ಒಂದು ಬದುಕನ್ನು ಅತ್ಯಂತ ದಾರುಣವಾಗಿ ಬಾಳಬೇಕಾಗಿ ಬಂದಿತ್ತು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅವರು ತಮ್ಮ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. “ನನ್ನ ದೇಹವು ಅನಾರೋಗ್ಯದಿಂದ ಕುರ್ಚಿಯಲ್ಲಿ ಕುಸಿಯಬಹುದು. ಆದರೆ, ನನ್ನ ಮೆದುಳು ವಿಶ್ವದ ಅಂತರಾಳವನ್ನು ಹುಡುಕುತ್ತದೆ” ಎಂದು ಭೌತಶಾಸ್ತ್ರಜ್ಞ ಹಾಕಿಂಗ್ ಬಹಳ ಆತ್ಮವಿಶ್ವಾಸದಿಂದ ಹೇಳಿದರು.
ಜನವರಿ 8, 1942 ರಂದು ಇಂಗ್ಲೆಂಡ್ನ ಆಕ್ಸ್ಫರ್ಡ್ನಲ್ಲಿ ಜನಿಸಿದ ಹಾಕಿಂಗ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೂವತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು. ಹಾಕಿಂಗ್ ಅವರ ತಾಯಿ ಇಸಾಬೆಲ್ ಹಾಕಿಂಗ್ ಅವರು ಬ್ರಿಟಿಷ್ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ಆದ್ದರಿಂದ, ಸ್ಟೀಫನ್ ಚಿಕ್ಕ ವಯಸ್ಸಿನಿಂದಲೂ ಪ್ರಗತಿಪರ ಮನೋಭಾವವನ್ನು ಹೊಂದಿದ್ದರು. ತಂದೆ ಫ್ರಾಂಕ್ ಮೆಡಿಕಲ್ ವೈದ್ಯ ಮತ್ತು ಸಂಶೋಧಕ. ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ನಲ್ಲಿ ಪ್ಯಾರಾಸಿಟಾಲಜಿ ವಿಭಾಗದ ಮುಖ್ಯಸ್ಥರಾಗಿದ್ದರು.
ಆಗಾಗ ಆಫ್ರಿಕಾಕ್ಕೆ ಹೋಗಿ ಅಲ್ಲಿ ಸಂಶೋಧನೆಯಲ್ಲಿ ಮಗ್ನರಾಗುತ್ತಿದ್ದರು. ಆದುದರಿಂದ ಸ್ಟೀಫನ್ ತನ್ನ ತಾಯಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಆಕೆ ಉನ್ನತ ಶಿಕ್ಷಣ ಪಡೆದ ಮಹಿಳೆಯಾಗಿದ್ದರು. ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ, ಆರ್ಥಿಕ ಮತ್ತು ತಾತ್ವಿಕ ವಿಜ್ಞಾನಗಳನ್ನು ಅಧ್ಯಯನ ಮಾಡಿದರು. ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ಟೀಫನ್ ಗೆ ಫಿಲಿಪ್ಪಾ ಮತ್ತು ಮೇರಿ ಎಂಬ ಇಬ್ಬರು ಸಹೋದರಿಯರಿದ್ದರು. ಮತ್ತು ಸಹೋದರ ಎಡ್ವರ್ಡ್ ಅವರನ್ನು ಅವರ ಪೋಷಕರು ದತ್ತು ಪಡೆದಿದ್ದರು. ಹದಿಮೂರನೆಯ ವಯಸ್ಸಿನಲ್ಲಿ, ಹಾಕಿಂಗ್ ಬರ್ಟ್ರಾಂಡ್ ರಸ್ಸೆಲ್ ಅವರನ್ನು ಆದರ್ಶ ವ್ಯಕ್ತಿಯಾಗಿ ಆಯ್ಕೆ ಮಾಡಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗ ಪರಿಚಯವಾದ ಜೇನ್ ವೈಲ್ಡ್ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾದರು. ಆಗಲೇ ಮೋಟಾರ್ ನ್ಯೂರೋಸಿಸ್ನಿಂದ ಅವರು ಬಳಲುತ್ತಿದ್ದರು. ನ್ಯಾಚುರಲ್ ಸೈನ್ಸ್ ಬಿಎ (ಆನರ್ಸ್) ಡಿಗ್ರಿಯಲ್ಲಿ ಅವರು ಪ್ರಥಮ ಶ್ರೇಣಿಯನ್ನು ಸಾಧಿಸಿದರು. ಫೈನಲ್ ಇಯರ್ ನಲ್ಲಿದ್ದಾಗ, ಸ್ಟೀಫನ್ ತನ್ನ ಕಣ್ಣುಗಳು ತಿರುಗಿ ಮೆಟ್ಟಿಲುಗಳ ಮೇಲೆ ಬಿದ್ದರು. ಮೂಖ ವಕ್ರವಾಯಿತು. ಕ್ರಿಸ್ಮಸ್ ರಜೆಯಲ್ಲಿ ಮನೆಗೆ ತೆರಳಿದ್ದಾಗ ಕುಟುಂಬಸ್ಥರು ಅವರ ಸ್ಥಿತಿಯನ್ನು ಗಮನಿಸಿ ಚಿಕಿತ್ಸೆ ಕೊಡಿಸಲು ಆರಂಭಿಸಿದ್ದರು.
ಆಗ ಅದು ALS ಎಂದು ಸಾಬೀತಾಯಿತು. ಅಂದರೆ, ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಕಾಯಿಲೆಯನ್ನು ಲೌ ಗೆಹ್ರಿಕ್ಸ್ ಕಾಯಿಲೆ ಎಂದೂ ಸಹ ಕರೆಯುತ್ತಾರೆ. ಇದು ಮೋಟಾರ್ ನ್ಯೂರಾನ್ ಕಾಯಿಲೆಯಾಗಿದೆ. ಅವರು 1963 ರಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದಾಗ, ವೈದ್ಯರು ಅವರಿಗೆ ಬದುಕಲು ಕೇವಲ ಎರಡು ವರ್ಷಗಳ ಗಡುವು ನೀಡಿದರು. ಅಂದರೆ ಅವರು 23 ನೇ ವಯಸ್ಸಿನಲ್ಲಿ ಸಾಯುತ್ತಾರೆ ಎಂದಿದ್ದರು. ಆದರೆ ಈಗ ಅವರ ವಯಸ್ಸು 76. ಬ್ಲಾಕ್ ಹೋಲ್ಸ್ ಕುರಿತು ಸಂಶೋಧನೆ ಮಾಡುವ ಸಂದರ್ಭದಲ್ಲಿ, 1965 ರಲ್ಲಿ ಅವರು ಗೊನ್ ವಿಲ್ಲಿ ಕೇಸ್ ಕಾಲೇಜಿನಿಂದ ಫೆಲೋಶಿಪ್ ಪಡೆದರು. ಹಾಗಾಗಿ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ಥಿಯರೆಟಿಕಲ್ ಫಿಸಿಕ್ಸ್ ಕಾಸ್ಮಾಲಜಿಯಲ್ಲಿ ಪಿಎಚ್ಡಿ ತೆಗೆದುಕೊಂಡ ಸ್ಟೀಫನ್ ಆರಂಭದಲ್ಲಿ ಕ್ಲಚ್ಗಳನ್ನು ಬಳಸಿ ನಿಧಾನವಾಗಿ ನಡೆದರು. ಕೆಲಸ ಮಾಡುತ್ತಿರುವ ವಿಶ್ವವಿದ್ಯಾನಿಲಯದ ವಿಭಾಗದ ಬಳಿ ಮನೆ ಹುಡುಕುವುದು ತುಂಬಾ ಕಷ್ಟಕರವಾಗಿತ್ತು. ಮತ್ತೊಂದೆಡೆ, ಪತ್ನಿ ಜೇನ್ ವೈಲ್ಡ್ ಕೂಡ ಪಿಎಚ್ಡಿ ಕಾರ್ಯಕ್ರಮದಲ್ಲಿ ಸೇರಿಕೊಂಡರು. ಮತ್ತೊಂದೆಡೆ ಮಕ್ಕಳ ಆರೈಕೆ. ಮಗ ರಾಬರ್ಟ್ (1967), ಮಗಳು ಲೂಸಿ (1970) ಮತ್ತು ಇನ್ನೊಂದು ಮಗು ತಿಮೋತಿ (1979) ಹುಟ್ಟಿದರು.
ಹಾಕಿಂಗ್ ತನ್ನ ದೈಹಿಕ ನ್ಯೂನತೆಗಳನ್ನು ಯಾರೊಂದಿಗೂ ಹೆಚ್ಚು ಚರ್ಚಿಸಲಿಲ್ಲ. ಅವರು ಹಣೆಬರಹ ಮತ್ತು ದೇವರಂತಹ ವಿಷಯಗಳನ್ನು ನಂಬುತ್ತಿರಲಿಲ್ಲ. ಆದ್ದರಿಂದ ಅವರು ವಾಸ್ತವವನ್ನು ಎದುರಿಸಲು ಸಿದ್ಧರಾಗಿದ್ದರು. ಅಂಗವೈಕಲ್ಯಕ್ಕೆ ಸಹಾನುಭೂತಿ ವ್ಯಕ್ತಪಡಿಸುತ್ತಾ ಸಹಾಯಕ್ಕೆ ಬಂದವರನ್ನು ಆಯ್ದುಕೊಳ್ಳುತ್ತಿದ್ದರು. ಅವರು ಮೊದಲು ತನ್ನನ್ನು ತಾನು ವಿಜ್ಞಾನಿ ಎಂದು ಗುರುತಿಸಿಕೊಳ್ಳಲು ಬಯಸಿದರು. ನಂತರ ಅವರು ಜನಪ್ರಿಯ ವಿಜ್ಞಾನ ಬರಹಗಾರರಾಗಿ ಗುರುತಿಸಿಕೊಳ್ಳಲು ಬಯಸಿದ್ದರು, ನಂತರ ಕೆಲವು ಆಲೋಚನೆಗಳು, ಭಾವನೆಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ಸಾಮಾನ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕೆಂದು ಬಯಸಿದರು. ‘ಕೆಲವರು ಅವರು ದೊಡ್ಡ ಧ್ಯೇಯವನ್ನು ಹೊಂದಿದ್ದಾರೆಂದು ಹೇಳಿದರೆ, ಇನ್ನೂ ಕೆಲವರು ಅವರು ‘ಹುಚ್ಚುತನದ ನಿರಂತರತೆ’ ಎಂದು ಹೇಳುತ್ತಿದ್ದರು. ಎರಡೂ ಅಭಿಪ್ರಾಯಗಳನ್ನು ಕೇಳಿಸಿಕೊಂಡ ಅವರ ಪತ್ನಿ ಜೇನ್ ಹಾಕಿಂಗ್ ಎರಡನ್ನೂ ಒಪ್ಪಿದರು. “ಅವೆರೆಡೂ ಸೇರಿ ಕೆಲಸ ಮಾಡುತ್ತಿದೆಯೋ?” ಅಥವಾ ಒಂದರ ನಂತರ ಒಂದರಂತೆ ಕೆಲಸ ಮಾಡುವುದೋ” ಎನ್ನುತ್ತಿದ್ದರು.
ವರ್ನರ್ ಇಸ್ರೇಲ್ ಎಂಬ ಭೌತಶಾಸ್ತ್ರಜ್ಞರು ‘MOZAT ಕಂಪೋಸಿಂಗ್ ಸಿಂಫನಿ’ ಅನ್ನು ತಂದು ಸ್ಟೀಫನ್ ಅವರ ತಲೆಯ ಮೇಲೆ ಜೋಡಿಸಿದರು. ಆದುದರಿಂದ ಇದು ತನ್ನನ್ನು ತಾನು ಅಭಿವ್ಯಕ್ತಗೊಳಿಸಿಕೊಳ್ಳುವ ಅವಕಾಶವನ್ನು ನೀಡಿತು. ಅದನ್ನು ಕಲಿಯಲು ಅವರಿಗೆ ಸ್ವಲ್ಪ ಸಮಯ ತೆಗೆದುಕೊಂಡರೂ, ಆ ನಂತರ ಅದು ಬಹಳಷ್ಟು ಉಪಯುಕ್ತವಾಯಿತು. 1970ರ ಹೊತ್ತಿಗೆ, ಮಾತು ಸಂಪೂರ್ಣವಾಗಿ ನಿಂತುಹೋಯಿತು. ಅವರ ಹಾವಭಾವಗಳು ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಮಾತ್ರವೇ ಅರ್ಥವಾಗುತ್ತಿತ್ತು. 1985 ರಲ್ಲಿ ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್ನ ಗಡಿಯಲ್ಲಿರುವ ಸೆರ್ನ್ (cern)ನ್ನು ಸಂಪರ್ಕಿಸಿದಾಗ ಅವರು ನ್ಯುಮೋನಿಯಾ ಕಾಯಿಲೆಗೆ ತುತ್ತಾದರು. ತೀವ್ರ ಅನಾರೋಗ್ಯವನ್ನು ಎದುರಿಸಬೇಕಾಯಿತು. ಅವರ ಪತ್ನಿ ಜೇನ್ ಹಾಕಿಂಗ್ ಅವರನ್ನು ‘ಲೈಫ್ ಸಪೋರ್ಟ್’ ತೆಗೆದುಹಾಕಬಹುದೇ ಎಂದು ಕೇಳಲಾಯಿತು. ಅದಕ್ಕೆ ಅವರ ಒಪ್ಪಲಿಲ್ಲ. ಪರಿಣಾಮವಾಗಿ ಟ್ರಾಕಿಯೊಟೊಮಿ (tracheotomy) ಬಂದಿತು. ಪರಿಣಾಮವಾಗಿ ಅವರು ಇಪ್ಪತ್ತನಾಲ್ಕು ಗಂಟೆಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಬೇಕಾಯಿತು. ನರ್ಸಿಂಗ್ ಹೋಮ್ ವೆಚ್ಚವನ್ನು ತಾವೇ ಭರಿಸುವುದಾಗಿ ನ್ಯಾಷನಲ್ ಹೆಲ್ತ್ ಸರ್ವೀಸ್ ಮುಂದೆ ಬಂದು ಅವರ ಬೆಂಬಲಕ್ಕೆ ನಿಂತಿತು. ಆದರೆ ಅವರ ಪತ್ನಿ ಒಪ್ಪಲಿಲ್ಲ. ಅವರು ಮನೆಯಲ್ಲೇ ಇರಲೆಂದು ಕೋರಿದರು. ಆ ಹಂತದಲ್ಲಿ ಅಮೆರಿಕನ್ ಫೌಂಡೇಶನ್ ಮುಂದೆ ನಿಂತು ಖರ್ಚುಗಳನ್ನು ನಿಭಾಯಿಸಿತು. ಮೂರು ಪಾಳಿಗಳಲ್ಲಿ ದಾದಿಯರನ್ನು ವ್ಯವಸ್ಥೆ ಮಾಡಿ ಮೇಲ್ವಿಚಾರಣೆ ನಡೆಸಲಾಯಿತು.
ನೇಮಕಗೊಂಡವರಲ್ಲಿ ನರ್ಸ್ ಎಲ್ಲೆನ್ ಮೇಸನ್ ಕೂಡ ಇದ್ದರು. ಅವರ ಪತಿ ಡೇವಿಡ್ ಕಂಪ್ಯೂಟರ್ ಇಂಜಿನಿಯರ್. ಅವರು ಸ್ಟೀಫನ್ ಹಾಕಿಂಗ್ ಅವರ ಗಾಲಿಕುರ್ಚಿಗೆ ಸಣ್ಣ ಕಂಪ್ಯೂಟರ್ ಅನ್ನು ಜೋಡಿಸಿದರು. ಅದರಲ್ಲಿರುವ ಸಿಂಥಸೈಜರ್ ವಿಷಯವನ್ನು ಮಾತುಗಳಾಗಿ ಪರಿವರ್ತಿಸಿ, ಅದನ್ನು ಇತರರಿಗೆ ಕೇಳುವಂತೆ ಮಾಡುತ್ತದೆ. ಆದ್ದರಿಂದ ತಮ್ಮ ಧ್ವನಿಯನ್ನು ಬಳಸಿಕೊಳ್ಳುವಂತೆ ಸ್ಟೀಫನ್ ಹೇಳಿದ್ದಾರೆ. ಅವರು ಮಾತು ನಿಂತು ಹೋಗುವ ಮುನ್ನ ಇದ್ದ ತಮ್ಮ ಕೊರಳ ಧ್ವನಿಯನ್ನು ಅದರಲ್ಲಿ ಬಳಸಬೇಕೆಂದು ಹೇಳಿದರು. ಆದ್ದರಿಂದ ಸ್ಟೀಫನ್ ಹಾಕಿಂಗ್ ಅವರ ತಾಂತ್ರಿಕ ಸಂಭಾಷಣೆಯನ್ನು ಸಹಜ ಸಂಭಾಷಣೆಯಂತೆ ಮಾರ್ಪಟ್ಟಿತು. ಸ್ಪೆಲಿಂಗ್ ಕಾರ್ಡ್ ಮೇಲೆ ಅಕ್ಷರಗಳನ್ನು ಆಯ್ಕೆ ಮಾಡಲು ಅವರು ತಮ್ಮ ಹುಬ್ಬುಗಳನ್ನು ಕದಲಿಸುತ್ತಿದ್ದರು. ನಂತರ 1986ರಲ್ಲಿ ‘ಈಕ್ವಲೈಸರ್’ ಎಂಬ ಕಂಪ್ಯೂಟರ್ ಪ್ರೋಗ್ರಾಂ ಲಭ್ಯವಾಯಿತು. ವರ್ಡ್ ಪ್ಲಸ್ (word plus)ನ ಸಿಇಒ ಆಗಿದ್ದ ವಾಲ್ಟರ್ ವೋಲ್ಟೋಸ್ ಅವರು ವಿನ್ಯಾಸಗೊಳಿಸಿದ ಸಾಫ್ಟ್ವೇರ್ ಅನ್ನು ತಂದು ಜೋಡಿಸಿದರು. ಇದು 2500-3000 ಅಕ್ಷರಗಳು, ಪದಗಳು ಮತ್ತು ಪದಗುಚ್ಛಗಳನ್ನು ಒಂದು ಸಣ್ಣ ಬಟನ್ ಒತ್ತಿದರೆ ಸಿಗುವಂತೆ ಮಾಡುತ್ತದೆ.
ನಿಮಿಷಕ್ಕೆ ಹದಿನೈದು ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯವನ್ನು ಆ ಸಾಫ್ಟ್ವೇರ್ ಹೊಂದಿದ್ದರಿಂದ ಅವರ ಉಪನ್ಯಾಸಗಳು, ಪ್ರಬಂಧಗಳು ಮತ್ತು ಬರಹಗಳು ಎಲ್ಲವನ್ನೂ ಸಿದ್ಧಪಡಿಸುವಂತಾಯಿತು. ಉಪನ್ಯಾಸ ನೀಡಬೇಕಾದ ಕಡೆ ಮುಂಗಡವಾಗಿ ಸ್ಪೀಚ್ ಸಿಂಥಸೈಜರ್ ಗೆ ಮೆಟೀರಿಯಲ್ ಕಳಿಸಿ ರೆಡಿಯಾಗಿ ಇಟ್ಟಿದ್ದರಿಂದ ಸ್ವತಃ ಅವರೇ ಮಾತನಾಡುತ್ತಿರುವಂತೆ ಇರುತ್ತಿತ್ತು . ಸ್ಟೀಫನ್ ಹಾಕಿಂಗ್ ಕೇವಲ ಒಬ್ಬ ಮನುಷ್ಯ, ಆತ್ಮವಿಶ್ವಾಸವನ್ನು ಮಾತ್ರವೇ ನಂಬಿದ ವಿಜ್ಞಾನಿ. ಮೇಧಾವಿಯೂ ಕೂಡ. ಅವರ ರಕ್ಷಣೆಗೆ ಅವರ ಕುಟುಂಬವಷ್ಟೇ ಅಲ್ಲ, ಇಡೀ ಸಮಾಜವೇ ತೆರಳಿ ಬಂದಿತು. ಮನುಷ್ಯನಿಗಾಗಿ ಮನುಷ್ಯರು ತೆರಳಿ ಬಂದಂತಾಯಿತು. ಇಂತಹ ದಯನೀಯ ಸ್ಥಿತಿಯಲ್ಲೂ ಕೂಡಾ ಸ್ಟೀಫನ್ ದೇವರನ್ನು ಪ್ರಾರ್ಥಿಸಲಿಲ್ಲ. ಹರಕೆ ಹೊರಲಿಲ್ಲ. ಕ್ರಿಸ್ತನನ್ನು ಭಜನೆ ಮಾಡಲಿಲ್ಲ. ಬದಲಿಗೆ “ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಯಲ್ಲಿ ದೇವರ ಪ್ರಮೇಯವೇ ಇಲ್ಲ’ ಎಂದರು. ಮನುಷ್ಯನ ಆವಿಷ್ಕಾರಗಳು ಮತ್ತು ಸಾಧನೆಗಳನ್ನು ‘ಇಲ್ಲದ ದೇವರ’ ಖಾತೆಯಲ್ಲಿ ಸೇರಿಸಿ ಬದುಕುವ ಪಲಾಯನವಾದಿಗಳು ಇರುವವರೆಗೆ ಯಾವುದೇ ಬದಲಾವಣೆ ಅಸಾಧ್ಯ. ಈ ಅಂಶವನ್ನು ಹೇಳಲು, ಸ್ಟೀಫನ್ ಹಾಕಿಂಗ್ ಅವರ ದೈಹಿಕ ದೌರ್ಬಲ್ಯದ ಕುರಿತು, ಅವರ ಅಚಲವಾದ ಆತ್ಮವಿಶ್ವಾಸದ ಕುರಿತು ಇಲ್ಲಿ ವಿವರಣೆ ನೀಡಲಾಗುತ್ತದೆ. 2005 ರಲ್ಲಿ, ಅವರು ತಮ್ಮ ಸಾಧನ (device)ವನ್ನು ಬಳಸಲು ಕೆನ್ನೆಯ ಸ್ನಾಯುಗಳನ್ನು ಚಲಿಸುತ್ತಿದ್ದರು. ಇದು ನಿಮಿಷಕ್ಕೆ ಒಂದು ಪದವನ್ನು ಮಾತ್ರ ತೆಗೆದುಕೊಳ್ಳುತ್ತಿತ್ತು.
ಇದು ತ್ರಾಸದಾಯಕವೆಂದು ತೋರುತ್ತಿರುವಂತೆ, ಇಂಟೆಲ್ ಸಂಶೋಧಕರ ಸಹಯೋಗದೊಂದಿಗೆ ಮತ್ತೊಂದು ವಿಧಾನವು ಲಭ್ಯವಾಯಿತು. ಅದು ಅವರ ಮೆದುಳಿನಲ್ಲಿರುವ ವಿಷಯಗಳನ್ನು (Brain pattern) ಮುಖದ ಅಭಿವ್ಯಕ್ತಿಗಳಿಗನುಗುಣವಾಗಿ ಅನುವಾದಿಸಿ ಹೇಳುತ್ತಿತ್ತು. ಅದೂ ಕೂಡ ಅಷ್ಟಾಗಿ ಉಪಯೋಗವಾಗದ ಕಾರಣ ಲಂಡನ್ನಲ್ಲಿರುವ ಶಿಫ್ಟ್ ಕೀ (shift key) ಕಂಪನಿಯೂ ಮುಂದೆ ಬಂದಿತು. ಅದಕ್ಕೂ ಮುನ್ನ ಸ್ಟೀಫನ್ ಹಾಕಿಂಗ್ ಬರೆದಿರುವ ಸಂಶೋಧನಾ ಪ್ರಬಂಧಗಳಲ್ಲಿನ ಪದಗಳು, ವಾಕ್ಯಗಳು, ವಿಷಯಗಳು ಮತ್ತು ಕ್ರಮೇಣ ಬಳಸುವ ಪದಗಳನ್ನು ನೆನಪಿಟ್ಟುಕೊಂಡು ಅವುಗಳನ್ನು ಟೈಪ್ ಮಾಡುತ್ತಿತ್ತು. ಈ ವಿಧಾನವನ್ನು ನಾವು ದಿನನಿತ್ಯ ಬಳಸುವ ಸ್ಮಾರ್ಟ್ ಫೋನ್ಗಳಲ್ಲಿಯೂ ಸಹ ಕಾಣಸಿಗುತ್ತವೆ. ನಾವು ಪಠ್ಯವನ್ನು ಟೈಪ್ ಮಾಡುವಾಗ ಇದು ಆಗಾಗ್ಗೆ ಬಳಸುವ ಪದಗಳನ್ನು ನೆನಪಿಸುತ್ತದೆ.
2009 ರ ಹೊತ್ತಿಗೆ, ಅವರು ತಮ್ಮ ಗಾಲಿಕುರ್ಚಿಯನ್ನು ನಿರ್ವಹಿಸಲಾಗದ ಸ್ಥಿತಿಗೆ ತಲುಪಿದರು. ನಂತರ, ಕುತ್ತಿಗೆ ಮತ್ತು ಮುಂಭಾಗದ ಭಾಗಗಳನ್ನು ಚಲಿಸಿದರೆ ಅದನ್ನು ಅನುಸರಿಸಿ ಕುರ್ಚಿಯೂ ಚಲಿಸುವ ರೀತಿಯಲ್ಲಿ ರಚಿಸಿದರು. ಆದರೆ ಅದು ಅವರಿಗೆ ಉಪಯೋಗವಾಗಲಿಲ್ಲ. ಹೀಗೆ ಮಾಡಿದ್ದರಿಂದ ಅವರಿಗೆ ಉಸಿರಾಟದ ತೊಂದರೆ ಎದುರಾಯಿತು. ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಂತಹ ಸ್ಥಿತಿಯಲ್ಲಿಯೂ ಸಹ ಅವರು ಮಾನವ ಜನಾಂಗದ ಬಗ್ಗೆ ಚಿಂತಿಸಿದರು. “ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಪ್ರಾಕೃತಿಕವಾಗಿ ಕುಸಿಯುತ್ತಿರುವ ಈ ಸಮಾಜದಲ್ಲಿ ಮಾನವ ಜನಾಂಗವು ಇನ್ನೂ ನೂರು ವರ್ಷ ಬದುಕುವುದು ಹೇಗೆ? ಎಂದು ಅವರು ಚಿಂತಿತರಾಗಿದ್ದರು. ಯೌವ್ವನದಲ್ಲಿ ವೈದ್ಯಕೀಯ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಸ್ಟೀಫನ್ ಹಾಕಿಂಗ್, ಜೀವನದಲ್ಲಿ ಸದ್ದಿಲ್ಲದೇ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಸತ್ವವನ್ನು ಕಳೆದುಕೊಳ್ಳುತ್ತಿದ್ದ ಅವರ ಶರೀರದೊಂದಿಗೆ ಹೋರಾಡುತ್ತಾ, ಜ್ಞಾನದ ಆಕಾಂಕ್ಷೆಗಾಗಿ ಹೋರಾಡುತ್ತಾ, ಪ್ರಪಂಚದ ಮನುಕುಲದ ಮೌಢ್ಯತೆ, ಅಜ್ಞಾನದ ವಿರುದ್ಧ ಸೆಣಸಾಡುತ್ತಾ, 76 ವರ್ಷ ವಯಸ್ಸಿನಲ್ಲಿಯೂ ಕೂಡಾ ಅಚಲವಾದ ಆತ್ಮವಿಶ್ವಾಸದೊಂದಿಗೆ ಒಂದು ಜ್ಞಾನ ಶಿಖರವಾಗಿ ನಿಂತಿದ್ದು ಅವರ ವಿಶೇಷತೆ! ಪೆಟ್ಟು ಬಿದ್ದರೆ ಅಥವಾ ಜ್ವರ ಬಂದರೆ ದೇವರನ್ನು ಪ್ರಾರ್ಥಿಸುವ, ಹರಕೆ ಹೊರುವ ಮೂಢನಂಬಿಕೆ ಯನ್ನು ಮೆಚ್ಚಿಕೊಂಡಿರುವ ಜನರು ಹಾಕಿಂಗ್ ಅವರ ಜೀವನದಿಂದ ಏನನ್ನಾದರೂ ಕಲಿಯಬಲ್ಲರಾ? ಉತ್ತಮ ಕೌಟುಂಬಿಕ ಹಿನ್ನೆಲೆ, ಉತ್ತಮ ಆರ್ಥಿಕ ಸಂಪನ್ಮೂಲ ಹೊಂದಿದ್ದರೂ, ಉತ್ತಮ ಆರೋಗ್ಯದೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದರೂ ಇತರರಿಗಾಗಿ ಅಲ್ಲ ತನಗೆ ತಾನೇ ಕೆಲಸಕ್ಕೆ ಬಾರದವರು ಪ್ರಪಂಚದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಹೋಲಿಸಿದರೆ ಹಾಕಿಂಗ್ ಅವರ ಜೀವನವು ಅತ್ಯಂತ ಉನ್ನತವಾದುದು.
ಅರ್ಥವಾಯಿತು ಕೂಡ! ಕೈಗಳಿಲ್ಲದೇ ಕಾಲಿನಿಂದ ಸಹಿ ಮಾಡುವವರನ್ನು ಅಥವಾ ಕಾಲುಗಳಿಲ್ಲದೇ ಕೈಗಳಲ್ಲಿ ನಡೆಯುವವರ ಬಗ್ಗೆ ಜನರು ಅನುಕಂಪ ತೋರುತ್ತಾರೆ. ಅವರ ಹೃದಯದ ಧೈರ್ಯವನ್ನು ಮೆಚ್ಚಿಕೊಳ್ಳುತ್ತಾರೆ. ಹಾಗಾದರೆ, ಸ್ಟೀಫನ್ ಹಾಕಿಂಗ್ ಕಥೆ ಏನು? ಮೆದುಳನ್ನು ಹೊರತುಪಡಿಸಿ ಅವರ ದೇಹದ ಎಲ್ಲಾ ಭಾಗಗಳು ಶಕ್ತಿ ಕಳೆದುಕೊಂಡಿತ್ತು ಅಲ್ಲವೇ? ಆದರೂ ಒಂದು ಕ್ಷಣವೂ ತನ್ನ ಧ್ಯೇಯವನ್ನು ಮರೆಯಲಿಲ್ಲ ಅಲ್ಲವೇ? ಅವರು ವಿಶ್ವವಿಜ್ಞಾನಕ್ಕೆ ಹೊಸ ವಿಷಯಗಳನ್ನು ನೀಡುತ್ತಾ ಬಂದಿದ್ದರು ಅಲ್ಲವೇ? ಮೃತ್ಯವಿನ ಅಂಚಿನಲ್ಲಿಯೂ ಉಸಿರಾಡುತ್ತಾ.. ಮನುಷ್ಯರ ವಿಜಯದ ಪರಂಪರೆಯ ಬಗ್ಗೆ ಮಾತ್ರವೇ ಚಿಂತಿಸಿದವರು ಡಾ.ಸ್ಟೀಫನ್ ಹಾಕಿಂಗ್. ಒಂದು ರೀತಿಯಲ್ಲಿ ಹೇಳುವುದಾದರೆ, ಆರೋಗ್ಯಕರವಾಗಿ ಕಾಣುವ ದುರ್ಬಲವಾದ ಲಕ್ಷಾಂತರ ಜನರಿಗಿಂತ ಹಾಕಿಂಗ್ ಹೆಚ್ಚು ದೃಢಸಂಕಲ್ಪ, ಮನೋಬಲವನ್ನು ಹೊಂದಿದವರು. ಆಕಾಶವೇ ಮಿತಿ ಎಂದು ಅವರು ಎಂದೂ ಭಾವಿಸಿರಲಿಲ್ಲ. ಅವರು ಆಕಾಶವನ್ನು ಸ್ವಲ್ಪ ಎತ್ತರಕ್ಕೆ ಇರಬೇಕೆಂದು ಸವಾಲು ಹಾಕಿದವರು.
- ಖ್ಯಾತ ಸಾಹಿತಿ, ಜೀವಶಾಸ್ತ್ರಜ್ಞರಾದ ಪ್ರೊಫೆಸರ್ ಡಾ.ದೇವರಾಜು ಮಹಾರಾಜು
ಅನುವಾದ : ರೇಣುಕಾ ಭಾರತಿ
Leave a reply