ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಲಿನಪೇಟೆಯ ಆರೂರು ಲಕ್ಷ್ಮೀನಾರಾಯಣರಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಪಡಿಸುವುದಾಗಿ ನಂಬಿಸಿ ಅಮೃತ ಸಿಂಚನ ಟ್ರಸ್ಟ್ ಶಾಲೆಯನ್ನು ದತ್ತು ಪಡೆದು, ಕಳಪೆ ಅಭಿವೃದ್ಧಿ ಮಾಡಿ, ಶಾಲೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ದಾನಿಗಳಿಂದ ಒಸೂಲಿ ಮಾಡಿದೆ. ಅಲ್ಲದೇ ಶಾಲಾ ಕಮಿಟಿಯಿಂದಲೂ 1.75 ಲಕ್ಷ ಹಣವನ್ನು ಪಡೆದಿದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ ಎಂದು ಪೋಷಕರು ಮತ್ತು ಸಾರ್ವಜನಿಕರು, ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಮುಖಂಡರು ಆರೋಪಿಸಿದ್ದಾರೆ.

ಒಂದು ವರ್ಷಗಳ ಕಾಲ ಶಾಲೆಯಲ್ಲಿ ಬೂಟಾಟಿಕೆಯ ಅಭಿವೃದ್ಧಿ ಮಾಡಿ, ದಬ್ಬಾಳಿಕೆ ನಡೆಸಿದೆ. ಅಲ್ಲದೇ ಶಾಲೆಯಲ್ಲಿ ಸರ್ಕಾರ ನೇಮಿಸಿದ ಶಿಕ್ಷಕರಾದ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಿಸಿ, ಅಮೃತ ಸಿಂಚನ ಟ್ರಸ್ಟ್ ನ ಚೇಲಾಗಳನ್ನು ಶಿಕ್ಷಕರನ್ನಾಗಿ ನೇಮಿಸಿ ಮಕ್ಕಳ ನಡುವೆ ತಾರತಮ್ಯ, ಜಗಳವನ್ನುಂಟು ಮಾಡಿ, ಪಠ್ಯ ಬೋಧನೆ ಮಾಡದೇ, ಹೋಮ್ ವರ್ಕ್ ಸಹ ನೀಡದೇ, ಶಾಲಾ ವಾತಾವರಣವನ್ನು ಹದಗೆಡಿಸಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಎರಡು ತಿಂಗಳಿಂದ ಶಾಲಾ ಶಿಕ್ಷಕರಿಗೆ ಮತ್ತು ಆಯಾ ಅವರಿಗೆ ಸಂಬಳ ನೀಡದೇ ವಂಚಿಸಿದೆ. ಅಲ್ಲದೇ ಈ ಕುರಿತು ಶಾಲಾ ಕಮಿಟಿಯವರು ಕೇಳಿದರೆ “ನಮಗೇನು ಹಣ ಆಕಾಶದಿಂದ ಉದುರಿತ್ತದೆಯೇ”? “ನೀವೇನುಬೇಕಾದರೂ ಮಾಡಿಕೊಳ್ಳಿ”, “ಶಾಲೆಗೆ ಹಣ ಕೊಡುವುದಿಲ್ಲ” ಎಂದು ಶಾಲೆಯನ್ನು ದಿಢೀರನೆ ಕೈಚಲ್ಲಿದೆ. ನ್ಯಾಯ ಕೇಳಿದರೆ.. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮತ್ತು 25 ಲಕ್ಷ ಹಣ ದಂಡ ನೀಡಬೇಕೆಂದು ಬೆದರಿಕೆ ಒಡ್ಡಿದೆ. ಈ ಬಗ್ಗೆ ಆಕ್ರೋಶಗೊಂಡ ಪೋಷಕರು “ಅಮೃತ ಸಿಂಚನ ಟ್ರಸ್ಟ್ ವಿರುದ್ಧ ಪ್ರತಿಭಟನೆ ನಡೆಸಿ ಕೊಪ್ಪ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರು. ಒಂದು ವಾರದೊಳಗೆ ಆ ಟ್ರಸ್ಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
https://www.facebook.com/share/v/pbAwzjDn6sEqmhXQ/?mibextid=oFDknk






Leave a reply