ನ್ಯೂಡೆಲ್ಲಿ : ಎಸ್ಸಿ-ಎಸ್ಟಿ ಉಪವರ್ಗೀಕರಣದ ಅಧಿಕಾರವನ್ನು ರಾಜ್ಯಗಳಿಗೆ ಬದ್ಧಗೊಳಿಸಿ ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ನೀಡಿದ ಸಂವೇದನಾಶೀಲ ತೀರ್ಪು ಕೇಂದ್ರ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ತೀರ್ಪನ್ನು ಬೆಂಬಲಿಸುವುದೋ ಅಥವಾ ವಿರೋಧಿಸುವುದೋ ಎಂಬ ಗೊಂದಲದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಕೇಂದ್ರದ ಜೊತೆಗೆ ಹಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಎನ್ಡಿಎ ಸರ್ಕಾರಗಳು ಅಧಿಕಾರದಲ್ಲಿವೆ. ಆದರೆ, ಆಗಸ್ಟ್ 1 ರಂದು ಎಸ್ಸಿ ಮತ್ತು ಎಸ್ಟಿ ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಆ ಪಕ್ಷ ಮೌನ ವಹಿಸಿದೆ.
ಈ ವಿಚಾರದಲ್ಲಿ ದುಡಿಕಿನಿಂದ ವ್ಯವಹರಿಸಬಾರದು ಎಂಬ ಧೋರಣೆ ಬಿಜೆಪಿಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸರ್ಕಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಸಂಘಟನೆಗಳೊಂದಿಗೆ ಮಾತನಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಈ ಕುರಿತು ಪ್ರತಿಕ್ರಿಯಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ದಲಿತ ಮುಖಂಡ ಗುರು ಪ್ರಕಾಶ್ ಪಾಸ್ವಾನ್ ಹೇಳಿದರು.
ಎಸ್ಸಿ ಮತ್ತು ಎಸ್ಟಿಗಳಿಗೆ ಸೇರಿದ ಕೆನೆಪದರ (ಕ್ರಿಮಿ ಲೇಯರ್)ವನ್ನು ಗುರುತಿಸಲು ಮತ್ತು ಹೊರಗಿಡಲು ರಾಜ್ಯಗಳು ನೀತಿಯನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ, ಜೆಡಿಯು ಮತ್ತು ಟಿಡಿಪಿಯಂತಹ ಎನ್ಡಿಎಯ ಹಲವಾರು ಪ್ರಮುಖ ಮಿತ್ರಪಕ್ಷಗಳ ಒತ್ತಡದಿಂದಾಗಿ ಕೇಂದ್ರವು ಕ್ರಿಮಿಲೇಯರ್ ವಿಷಯದಲ್ಲಿ ಹಿಂದೆ ಸರಿದಿದೆ. ಕ್ರೀಮಿಲೇಯರ್ ಜಾರಿಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಎನ್ಡಿಎಯಲ್ಲಿ ಇಲ್ಲದ ಒಮ್ಮತ…
ಎಸ್ಸಿ ಮತ್ತು ಎಸ್ಟಿ ಉಪವರ್ಗೀಕರಣ ವಿಚಾರದಲ್ಲಿ ರಾಜ್ಯಗಳಿಗೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಕೇಂದ್ರ ಇನ್ನೂ ತನ್ನ ನಿಲುವನ್ನು ವ್ಯಕ್ತಪಡಿಸಿಲ್ಲ. ಆದರೆ, ಈ ನಿಟ್ಟಿನಲ್ಲಿ ಕೇಂದ್ರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಪಕ್ಷಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಟಿಡಿಪಿ ಮತ್ತು ಜೆಡಿಯು ಸುಪ್ರೀಂ ಕೋರ್ಟ್ ತೀರ್ಪನ್ನು ಬೆಂಬಲಿಸಿದರೆ, ಎಲ್ಜೆಪಿ (ಪಾಶ್ವಾನ್) ಪಕ್ಷವು ಅದನ್ನು ವಿರೋಧಿಸಿದೆಲ. ಮೋದಿ 2.O ಸರ್ಕಾರವು ಎಸ್ಸಿಗಳ ನಡುವಿನ ಅಸಮಾನತೆಯ ವಿಷಯದ ಕುರಿತು ಈ ವರ್ಷದ ಜನವರಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಸಹ ರಚಿಸಿತು. ಆದರೆ, ತೆಲಂಗಾಣ ಜತೆಗೆ ಎಪಿಯಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಮಾದಿಗರ ಓಟು ಬ್ಯಾಂಕ್ ಅನ್ನು ಸಮಾಧಾನ ಪಡಿಸಲು ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಬಿಜೆಪಿಯಲ್ಲೇ ಒಮ್ಮತವಿಲ್ಲ ಮತ್ತು ಹಲವು ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳ ಅಸಂಬ್ಲಿ ಚುನಾವಣೆಯ ಪ್ರಭಾವ
ಹರ್ಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಿಗದಿತ ವೇಳಾಪಟ್ಟಿಯಂತೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ವರ್ಷ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳು ನಡೆಯಲಿವೆ. ಹರಿಯಾಣ ರಾಜ್ಯದ ಜನಸಂಖ್ಯೆಯ 20 ಪ್ರತಿಶತ ದಲಿತ ಜನಸಂಖ್ಯೆಯಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ದಲಿತರು ಮತ್ತು ಆದಿವಾಸಿಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರದಲ್ಲಿ ಸ್ಪಷ್ಟತೆಗೆ ಬಾರಲಾಗದ ಸಂಕಷ್ಟದ ಸ್ಥಿತಿಯನ್ನು ಬಿಜೆಪಿ ಸಿಲುಕಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ದಲಿತ ಸಂಘಟನೆಗಳ ಆಗ್ರಹ
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ದೇಶಾದ್ಯಂತ ಹಲವು ದಲಿತ ಸಮುದಾಯಗಳು ಆಕ್ರೋಶಗೊಂಡಿವೆ. ಈ ಎಲ್ಲ ಸಮುದಾಯಗಳು ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿವೆ. ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ತಿರಸ್ಕರಿಸಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಅಶೋಕ್ ಭಾರತಿ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು. “ಹರಿಯಾಣ ಮತ್ತು ಇತರೆ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದೆ. ನಾವು ಪ್ರಧಾನಿ ಕಾರ್ಯಾಲಯಕ್ಕೆ (PMO) ಮೆಮೋರಂಡಂ ಪತ್ರವನ್ನು ಸಲ್ಲಿಸಿದ್ದೇವೆ. ಶೀಘ್ರದಲ್ಲೇ ನಾವು ಸುಪ್ರೀಂ ಕೋರ್ಟ್ಗೆ ತೆರಳಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ” ಎಂದು ಅವರು ಹೇಳಿದರು. ಇತ್ತೀಚೆಗೆ ದಲಿತ ಮತ್ತು ಆದಿವಾಸಿ ಸಂಘಟನೆಗಳು ಕರೆ ನೀಡಿದ್ದ ದೇಶಾವ್ಯಾಪಿ ಪ್ರತಿಭಟನೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆರ್ಜೆಡಿ, ಬಿಎಸ್ಪಿ ಮತ್ತು ಎನ್ಡಿಎ ಮಿತ್ರಪಕ್ಷ ಎಜೆಪಿ (ಆರ್ವಿ) ಬೆಂಬಲ ನೀಡಿವೆ.
Leave a reply