ನ್ಯೂಡೆಲ್ಲಿ : ಕೊಲ್ಕತ್ತಾದಲ್ಲಿ ಆರ್ ಜಿ ಕಾರ ಆಸ್ಪತ್ರೆಯಲ್ಲಿ ಮಹಿಳಾ ಡಾಕ್ಟರ್ ಮೇಲೆ ನಡೆದ ಕ್ರೌರ್ಯತೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೇ ವೇಳೆ 151 ಮಂದಿ ಹಾಲಿ ಸಂಸದರು ಮತ್ತು ಶಾಸಕರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ.
ಇದರಲ್ಲಿ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಲವು ನಾಯಕರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವುದು ಬಹಿರಂಗಗೊಂಡಿದೆ. 2019 ಮತ್ತು 2024 ರ ನಡುವೆ ಚುನಾವಣಾ ಆಯೋಗಕ್ಕೆ ಸಂಸದರು ಮತ್ತು ಶಾಸಕರು ಸಲ್ಲಿಸಿದ 4,809 ಅಫಿಡವಿಟ್ಗಳಲ್ಲಿ 4,693 ಅನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಎಡಿಆರ್ ಹೇಳಿದೆ. 16 ಮಂದಿ ಸಂಸದರು ಮತ್ತು 135 ಮಂದಿ ಶಾಸಕರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಮಹಿಳೆಯರ ಮೇಲೆ ಅಪರಾಧಗಳನ್ನು ಎಸಗಿದ ಪ್ರಕರಣಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯದ 25 ಮಂದಿ ಶಾಸಕರು ಮತ್ತು ಸಂಸದರು ಇದ್ದಾರೆಂದು ಹೇಳಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶದ 21 ಮಂದಿ ಮತ್ತು ಒಡಿಶಾದ 17 ಮಂದಿ ಇದ್ದಾರೆ ಎಂದು ಅದು ಹೇಳಿದೆ. 16 ಮಂದಿ ಶಾಸಕರು ಮತ್ತು ಸಂಸದರು ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರು ದೋಷಿ ಎಂದು ಸಾಬೀತಾದರೆ ಹತ್ತು ವರ್ಷ ಅಥವಾ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಎಡಿಆರ್ ವರದಿ ಸ್ಪಷ್ಟಪಡಿಸಿದೆ.
ಗರಿಷ್ಠ 54 ಮಂದಿ ಬಿಜೆಪಿ ನಾಯಕರು ಈ ಪ್ರಕರಣಗಳನ್ನು ಎದುರಿಸುತ್ತಿದ್ದರೆ, 24 ಮಂದಿ ಕಾಂಗ್ರೆಸ್ ನಾಯಕರಿದ್ದಾರೆ ಎಂಬುದು ಗಮನಾರ್ಹ. ಅವರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತ ತನಿಖೆ ನಡೆಸಬೇಕು ಎಂದು ಎಡಿಆರ್ ಮನವಿ ಮಾಡಿದೆ. ಈ ಅಪರಾಧಗಳನ್ನು ಎದುರಿಸುತ್ತಿರುವ ನಾಯಕರಿಂದ ದೂರವಿರುವಂತೆ ಮತದಾರರಿಗೆ ಮನವಿ ಮಾಡಿದೆ.
Leave a reply