ಲಕ್ನೋ : ಹತ್ರಾಸ್ ದಲಿತ ಕುಟುಂಬಕ್ಕೆ ನಾಲ್ಕು ವರ್ಷಗಳೇ ಕಳೆದರೂ ನ್ಯಾಯ ಸಿಕ್ಕಿಲ್ಲ. ಪುನರ್ವಸತಿ ಮತ್ತು ಇತರೆ ಸಹಾಯಕ್ಕಾಗಿ ಕುಟುಂಬವು ಹತಾಶವಾಗಿ ಕಾಯುತ್ತಿದೆ. ಆಶಾಳ ಚಿತಾಭಸ್ಮ ಇನ್ನೂ ಚಿಕ್ಕ ಮಣ್ಣಿನ ಪಾತ್ರೆಯಲ್ಲಿದೆ. ಅವಳ ಬಟ್ಟೆ ಮತ್ತು ಒಣಗಿದ ನೇಲ್ ಪಾಲಿಶ್ ಬಾಟಲಿಗಳನ್ನು ನೋಡುತ್ತಾ… ಪೋಷಕರು ಕಾಲ ಕಳೆಯುತ್ತಿದ್ದಾರೆ. “ನಮಗೆ ನ್ಯಾಯ ಸಿಗುವವರೆಗೂ ಅವಳ ಚಿತಾಭಸ್ಮವನ್ನು ನದಿಯಲ್ಲಿ ಬಿಡುವುದಿಲ್ಲ” ಎಂದು ಆಶಾಳ ತಾಯಿ ಹೇಳುತ್ತಾರೆ.
ನಡೆದದ್ದೇನು?
ಹತ್ರಾಸ್ನಲ್ಲಿ ಸಾಮೂಹಿಕ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ನಡೆದು ನಾಲ್ಕು ವರ್ಷಗಳಾಗಿವೆ. ಸೆಪ್ಟೆಂಬರ್ 14, 2020 ರಂದು, 19 ವರ್ಷದ ದಲಿತ ಯುವತಿ ಆಶಾ ತನ್ನ ಮನೆಯಿಂದ ಕೆಲವು ಮೀಟರ್ ದೂರದಲ್ಲಿ ಅರೆಬೆತ್ತಲೆಯಾಗಿ ಮತ್ತು ಜೀವಂತ ರಕ್ತಸ್ರಾವದಿಂದ ಪತ್ತೆಯಾಗಿದ್ದಳು. ಎರಡು ವಾರಗಳ ನಂತರ, ಆಕೆಯ ಸ್ಥಿತಿ ಹದಗೆಟ್ಟಿತು. ಅವಳು ಆಸ್ಪತ್ರೆಯಲ್ಲಿ ಮೃತಪಟ್ಟಳು. ಆಕೆಯ ದೇಹವನ್ನು ಉತ್ತರ ಪ್ರದೇಶ ಪೊಲೀಸರು ಯೋಗಿ ಕಣ್ಣು ಸನ್ನೆಯಲ್ಲೋ ಅಥವಾ ಠಾಕೂರ್ಗಳ ಒತ್ತಡದಿಂದಲೋ ಸುಟ್ಟು ಹಾಕಿದರು. ಅಂದಿನಿಂದ ಇಂದಿನವರೆಗೂ ಠಾಕೂರ್ ಜನಾಂಗದವರು ಬಹುಸಂಖ್ಯಾತರಿರುವ ಆ ಗ್ರಾಮದಲ್ಲಿ ನಡೆದ ಕೃತ್ಯಗಳನ್ನು ಮರೆಮಾಚಲು ಯೋಗಿ ಸರ್ಕಾರ ಯತ್ನಿಸಿತು. ಆದರೆ ಮಾಧ್ಯಮಗಳಲ್ಲಿ ಕಟು ಸತ್ಯಗಳು ಬೆಳಕಿಗೆ ಬಂದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗದಂತೆ ವಿರೋಧ ಪಕ್ಷಗಳನ್ನು ಯುಪಿಯಲ್ಲಿ ಬಿಜೆಪಿ ಸರ್ಕಾರ ತಡೆಯಿತು. ನಿರ್ಬಂಧಗಳನ್ನು ವಿಧಿಸಿತು.
ಆಶಾಳ ಮೃತಪಟ್ಟು ನಾಲ್ಕು ವರ್ಷಗಳ ನಂತರ ಮೂವರು ಆರೋಪಿಗಳು ಗ್ರಾಮಕ್ಕೆ ಮರಳಿದ್ದರು. ಆದರೆ ಆ ದಲಿತ ಕುಟುಂಬ ಮಾತ್ರ ತಮ್ಮ ಮನೆಯಲ್ಲಿ ಪಂಜರದಲ್ಲಿ “ಬಂಧಿಖಾನೆ” ಯಂತೆ ಜೀವನ ನಡೆಸುತ್ತಿದೆ. ಆಶಾಳ ಕುಟುಂಬ ಜುಲೈ 2024 ರಲ್ಲಿ ಅಲಹಾಬಾದ್ ಹೈಕೋರ್ಟ್ಗೆ ವರದಿ ಸಲ್ಲಿಸಿತು. ತಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿ, ಕೆಲಸ ಕೊಡಿಸುವಂತೆ ಮನವಿ ಮಾಡಿದರು. ಆದರೆ ಅದು ಆಗಲಿಲ್ಲ. ಭದ್ರತಾ ವ್ಯವಸ್ಥೆಯಿಂದಾಗಿ ಓಡಾಡಲು ಕಷ್ಟವಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಉತ್ತರಿಸುವಂತೆ ಕೋರ್ಟ್ ಹೇಳಿತು. ಅಲ್ಲಿ ಎಂಟು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಕ್ಷಣೆಗೆ ಸಿಬ್ಬಂದಿಗಳನ್ನು ನೇಮಿಸಿದ್ದರೂ.. ಠಾಕೂರರ ಹೊಡೆತಕ್ಕೆ ಹೆದರಿ.. ದಲಿತ ಕುಟುಂಬ ಯಾತನೆ ಅನುಭವಿಸುವಂತಾಗಿದೆ.
Leave a reply