ಹರಿಹರಪುರ : ಕರ್ನಾಟಕ ಜಾನಪದ ಪರಿಷತ್ತು ಸಹಕಾರದೊಂದಿಗೆ ತಾಲ್ಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಶ್ರಾವಣ ನುಡಿಸಿರಿ’ ಕಾರ್ಯಕ್ರಮದಲ್ಲಿ ‘ಎಂ.ಕೆ.ಇಂದಿರಾ-ಬದುಕು, ಬರಹ’ ವಿಷಯವಾಗಿ ಲೇಖಕಿ ದೀಪಾ ಹಿರೇಗುತ್ತಿ ಅವರು ಮಾತನಾಡುತ್ತಾ.. “ಎಂ.ಕೆ.ಇಂದಿರಾ ಅವರು 49 ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಹಲವು ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ವಿಯಾಗಿವೆ. ಅವರು ಮಾಧ್ಯಮಿಕ ಶಾಲೆಗೆ ಎರಡು ವರ್ಷ ಹೋಗಿದ್ದರು. ನಂತರ ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದೆಂಬ ಸಾಮಾಜಿಕ ಒತ್ತಡಕ್ಕೆ ಮಣಿದು ಅವರ ಪೋಷಕರು ಅವರನ್ನು ಶಾಲೆ ಬಿಡಿಸಿದರು. ಸಂಪ್ರದಾಯಸ್ಥ ಕುಟುಂಬದಲ್ಲಿದ್ದರೂ ಸಂಪ್ರದಾಯಗಳ ವಿರುದ್ಧವೇ ಬರೆದು ಕಾಲಪ್ರವಾಹದ ವಿರುದ್ಧ ಈಜಿದ ಲೇಖಕಿ ಎಂ.ಕೆ.ಇಂದಿರಾ” ಎಂದರು.
“ವಿಧವೆಯ ಗೋಳು, ಬಾಲ್ಯವಿವಾಹ, ಜಾತಿಪದ್ಧತಿ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಬರೆದರು. ಬಂಡಾಯದ ಮನಸ್ಥಿತಿ ಹೊಂದಿರುವ ಲೇಖಕಿ ಎಂ.ಕೆ.ಇಂದಿರಾ” ಎಂದು ಅವರು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರು ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್ ಮಾತನಾಡಿ, “ಕನ್ನಡದ ಕೆಲಸ ಮಾಡುವುದರಿಂದ ನಮಗೆ ಸಂಸ್ಕಾರ ಬರುತ್ತದೆ. ಶರೀರದ ಕೊಳೆ ತೆಗೆಯಲು ಪ್ರತಿದಿನ ಸ್ನಾನ ಮಾಡುವಂತೆ ಮನಸ್ಸಿನ ಕೊಳೆ ತೆಗೆಯಲು ನಾವು ಎಂ.ಕೆ.ಇಂದಿರಾರ ಸಾಹಿತ್ಯ ಓದಬೇಕು. ಹಿಂದೆ ಶಿಕ್ಷಣದ ಕೊರತೆ ಇದ್ದರೂ ಜನರಲ್ಲಿ ಮೌಲ್ಯಗಳಿದ್ದವು. ಇಂದು ಶಿಕ್ಷಣ ಇದೆ ,ಆದರೆ ಮೌಲ್ಯ ಇಲ್ಲ “ಎಂದರು.
ಹರಿಹರಪುರ ಮಲ್ಲೇಶಯ್ಯನವರ ಛತ್ರದಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ಹರಿಹರಪುರ ಹೋಬಳಿ ಕ.ಸಾ.ಪ., ರೋಟರಿ ಸಮುದಾಯದಳ ಹರಿಹರಪುರ ಹೋಬಳಿ, ಕರ್ನಾಟಕ ಜಾನಪದ ಪರಿಷತ್ತು ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹೋಬಳಿ ಕ.ಸಾ.ಪ.ಅಧ್ಯಕ್ಷ ವೈದ್ಯ ಬಿ.ಆರ್ ಅಂಬರೀಶ್, ರೋಟರಿ ಸಮುದಾದಳ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಹೋಬಳಿ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷೆ ತಮನ್ನಾ ಉಪಸ್ಥಿತಿರಿದ್ದು ಮಾತನಾಡಿದರು. ಸಭೆಯಲ್ಲಿ ನಿವೃತ್ತ ಯೋಧ ಶುಕುರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.
ಹಾಲ್ಮುತ್ತೂರು ಭವಾನಿಶಂಕರ ಭಜನಾಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕರಾದ ಅಣ್ಣಯ್ಯ ಎಲ್ಲರನ್ನೂ ಸ್ವಾಗತಿಸಿದರು. ಸಿರಿಗನ್ನಡ ವೇದಿಕೆಯ ಕಸಬ ಹೋಬಳಿ ಅಧ್ಯಕ್ಷರಾದ ನಿಲುಗುಳಿ ಪದ್ಮನಾಭರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊನೆಯಲ್ಲಿ ವೇದಿಕೆಯ ತಾಲ್ಲೂಕು ಕಾರ್ಯದರ್ಶಿ ಶಿಕ್ಷಕ ಬಿ.ಡಿ. ನಾಗರಾಜ್ ವಂದನಾರ್ಪಣೆ ಮಾಡಿದರು. ಎ.ಒ.ವೆಂಕಟೇಶ್, ಸುಮ, ಸುಮಿತ್ರಾ, ನಾರಾಯಣ್ ಸೇರೇಗಾರ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
Leave a reply