ಬೆಂಗಳೂರು : ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ (MUDA) ಭೂ ಹಗರಣ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಮುಡಾದಿಂದ ಅವರ ಪತ್ನಿಗೆ ಅನುಚಿತವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪಿಸಲಾಗಿತ್ತು. ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದನ್ನು ಸಿದ್ದರಾಮಯ್ಯ ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ಈ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿತ್ತು. ಇದು ತಮ್ಮ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಬೆಂಚ್ ಮುಂದೆ ಸಿಎಂ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಈ ಪ್ರಕರಣವನ್ನು ಇದೇ ತಿಂಗಳ 29 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಪ್ರಕರಣದ ವಿಚಾರಣೆಯ ತನಕ ಮಧ್ಯಂತರ ಆದೇಶ ಜಾರಿಯಲ್ಲಿರುತ್ತದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ಪ್ರತಿವಾದಿಗಳಿಗೆ ಸೂಚಿಸಿದೆ. ಆದರೆ, ಮಧ್ಯಂತರ ಆದೇಶಕ್ಕೆ ದೂರುದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಮುಡಾ ಭೂ ಮಂಜೂರಾತಿ ಹಗರಣದಲ್ಲಿ ಸಾಮಾಜಿಕ ಹೋರಾಟಗಾರರಾದ ಟಿ.ಜೆ.ಅಬ್ರಹಾಂ, ಸ್ನೇಹಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಅವರು ಸಲ್ಲಿಸಿರುವ ಖಾಸಗಿ ದೂರಿನ ಮೇರೆಗೆ ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಜುಲೈನಲ್ಲಿ ಅಬ್ರಹಾಂ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದಾಗ, ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು. ಮೈಸೂರಿನಲ್ಲಿ ಸುಮಾರು 14 ನಿವೇಶನಗಳನ್ನು ಮುಡಾದಿಂದ ಸಿದ್ದರಾಮಯ್ಯ ಪತ್ನಿಗೆ ನೀಡಿದ್ದಾರೆ ಎಂಬುದು ಪ್ರಮುಖ ಆರೋಪ. ಪ್ರಕರಣದ ವಿಚಾರಣೆ ವೇಳೆ ಸಿಂಘ್ವಿ, ಈ ವಿಷಯದಲ್ಲಿ ಗಂಭೀರ ಸಾಂವಿಧಾನಿಕ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.
ಪ್ರಕರಣದ ಪೂರ್ವಾಪರ ವಿವರಿಸಿದ ಅವರು, ತನಿಖೆಗೆ ಅನುಮತಿ ನೀಡಲು ಕಾರಣಗಳನ್ನು ತಿಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ದಲಿತ ಸಮುದಾಯಗಳಿಗೆ ಸೇರಿದ ಭೂಮಿಯನ್ನು ಆಕ್ರಮಿಸಿದ್ದಾರೆಂದು, ನಕಲಿ ದಾಖಲೆಗಳನ್ನು ಬಳಸಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಒತ್ತುವರಿ ಮಾಡಿ ಹಂಚಿಕೆ ಮಾಡಲಾಗಿದೆಯೆಂದು, ಇದರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸಿದ್ದರಾಮಯ್ಯ ಅವರ ಸೋದರ ಮಾವ ಮಲಿಕಾರ್ಜುನ ಸ್ವಾಮಿ ದೇವರಾಜ್ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಮುಡಾ ಅಧಿಕಾರಿಗಳ ವಿರುದ್ಧವೂ ಆರೋಪ ಕೇಳಿಬಂದಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವೆಲ್ಲವನ್ನೂ ಅಲ್ಲಗಳೆದಿದ್ದಾರೆ.
Leave a reply