ವಯನಾಡ್ : ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರದ ನಿವೃತ್ತ ವಿಜ್ಞಾನಿ ಸೋಮನ್ ಅವರು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಈ ಅನಾಹುತದಲ್ಲಿ ಹೆಚ್ಚು ಹಾನಿಗೊಳಗಾದ ಮುಂಡಕ್ಕೈ ಮತ್ತು ಚುರಲ್ ಮಲೆ ಪ್ರದೇಶಗಳು ನದಿಯ ದಡದಲ್ಲಿವೆ ಎಂದು ಅವರು ಹೇಳಿದರು. ಈ ಹಿಂದೆ ಭೂಕುಸಿತ ಉಂಟಾಗಿ ನದಿಯೊಂದಿಗೆ ಬಿದ್ದಿರಬಹುದು. ಈ ಕಾರಣದಿಂದ ನದಿಯ ಪ್ರವಾಹದ ದಿಕ್ಕು ಬದಲಾಗಿದ್ದರಿಂದ ಏರ್ಪಟ್ಟಿರುವ ಪ್ರದೇಶದಲ್ಲಿ ಮನೆ, ಅಂಗಡಿಗಳು ತಲೆ ಎತ್ತಿವೆ ಎಂದು ಅಭಿಪ್ರಾಯಪಟ್ಟರು.

ನೀರಿಗೆ ಗತಕಾಲದ ಪ್ರವಾಹದ ಗುರುತು ತಿಳಿದಿರುತ್ತದೆ ಎಂದ ಅವರು, ಈಗ ನದಿ ಹಿಂದೆ ಹರಿದಿದ್ದ ದಿಕ್ಕನ್ನು ಮರಳಿ ಪಡೆಯುತ್ತದೆಯಾದ್ದರಿಂದ ಇವೆಲ್ಲವೂ ಕೊಚ್ಚಿ ಹೋಗಿರಬಹುದು ಎಂದರು. ಭೂಕುಸಿತ ಆರಂಭವಾದ ವೆಳ್ಳರಿಮಲೆ ಸಮುದ್ರ ಮಟ್ಟದಿಂದ 2,000 ಅಡಿ ಎತ್ತರದಲ್ಲಿದೆ. ಮುಂಡಕ್ಕೈ ಮತ್ತು ಚುರಲ್ ಮಲೆ ಸಮುದ್ರ ಮಟ್ಟದಿಂದ 900-1,000 ಅಡಿ ಎತ್ತರದಲ್ಲಿದೆ. ಆದ್ದರಿಂದ ಬಂಡೆಗಳು ಬಹಳ ಬಲವಾಗಿ ಕೆಳಗೆ ದೂಡಿಕೊಂಡು ಬಂದು ಬಿದ್ದಿವೆ ಎಂದರು.

334ಕ್ಕೇರಿದ ಮೃತರ ಸಂಖ್ಯೆ…
ವಯನಾಡ್ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದುವರೆಗೆ 334 ಕ್ಕೆ ಏರಿಕೆಯಾಗಿದೆ. 281 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅವಶೇಷಗಳ ಅಡಿಯಲ್ಲಿರುವವರ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಡ್ರೋನ್ ಮತ್ತು ಥರ್ಮಲ್ ಸ್ಕ್ಯಾನರ್ಗಳ ಮೂಲಕ ಹುಡುಕಾಟ ನಡೆಸಲಾಗಿದೆ. ಮುಂಡಕ್ಕೈನಲ್ಲಿ ಕೊಚ್ಚಿಹೋಗಿರುವ ಅಂಗಡಿಯೊಂದರ ಬಳಿ ಅವಶೇಷಗಳಡಿಯಲ್ಲಿ ಜೀವ ಇರುವ ಸಾಧ್ಯತೆಯಿದೆ ಎಂದು ಥರ್ಮಲ್ ಸ್ಕ್ಯಾನರ್ ಪತ್ತೆ ಹಚ್ಚಿದೆ.

ಆದರೆ, 3 ಮೀಟರ್ ಆಳದಲ್ಲಿ ಐದು ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಮನುಷ್ಯನ ಕುರುಹು ಪತ್ತೆಯಾಗಿಲ್ಲ. ಮತ್ತೊಂದೆಡೆ, ಪಶ್ಚಿಮ ಘಟ್ಟದ 56,800 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಕೇಂದ್ರವು ಹೊರಡಿಸಿದೆ. ಭೂಕುಸಿತದಿಂದ ಧ್ವಂಸಗೊಂಡ ವಯನಾಡಿನ 13 ಹಳ್ಳಿಗಳು ಸಹ ಈ ಪರಿಧಿಯನ್ನು ಒಳಗೊಂಡಿದೆ.

Leave a reply