ಬರ ಬಂದಾಗ, ನೆರೆ ಬಂದಾಗ ಕರ್ನಾಟಕಕ್ಕೆ ಬಾರದ ಕರ್ನಾಟಕದ ಬಿಜೆಪಿ ಸಂಸದೆ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಬರುವುದು ಏಕೈಕ ಕಾರಣಕ್ಕೆ. ಸುಳ್ಳುಗಳ ಮೂಟೆಗಳನ್ನು ಹಂಚಿ ಬಿಜೆಪಿ ಸರ್ಕಾರಗಳ ದ್ರೋಹಗಳನ್ನು ಕುತರ್ಕ, ವಿತರ್ಕಗಳಿಂದ ಸಮರ್ಥಿಸಿಕೊಳ್ಳುವುದಕ್ಕೆ ಮಾತ್ರ. ಅದೇರೀತಿ ಬಜೆಟ್ ಮಂಡನೆಯಾದ ಮೇಲೆಯೂ ಕರ್ನಾಟಕಕ್ಕೆ ಬಂದ ನಿರ್ಮಲಕ್ಕ ಮೋದಿ ಸರ್ಕಾರ ಈ ಬಜೆಟ್ಟಿನಲ್ಲೂ ರಾಜ್ಯಕ್ಕೆ ಅಗಾಧ ಅನ್ಯಾಯಗಳನ್ನು ಮಾಡಿದ್ದರೂ ಅಪಾರ ಕೊಡುಗೆ ನೀಡಿದೆ ಎಂದು ನಂಬಿಸಲು ಹಲವಾರು ಕುತರ್ಕಗಳನ್ನು, ತರ್ಕಕ್ಕೆ ಹೊಂದದ ಅಂಕಿಅಂಶಗಳನ್ನು ಮಂಡಿಸಿದ್ದಾರೆ. ಬಜೆಟ್ ಎಂದರೆ ಜಟಿಲ ಗಣಿತ ಎಂಬಂತೆ ಇರುವಾಗ ಮಾಧ್ಯಮಗಳು ಅವನ್ನು ಚಾಚೂ ತಪ್ಪದೆ ಅಚ್ಚಿಸಿವೆ. ಸಾಮಾನ್ಯವಾಗಿ ಸರ್ಕಾರಗಳು ಬಜೆಟ್ಟಿನಲ್ಲಿ ಒಂದು ರಾಜ್ಯಕ್ಕೆ ಅಥವಾ ಒಂದು ಜನಸಮುದಾಯಕ್ಕೆ ಅಪಾರ ಕೊಡುಗೆ ಕೊಟ್ಟಿದೆ ಎಂದು ಹೇಳುವಾಗ ಎರಡು ತರ್ಕ ಮುಂದಿಡುತ್ತವೆ.
1. ತಮ್ಮ ಸರ್ಕಾರ ಹಿಂದಿನ ಸರ್ಕಾರಗಳಿಗಿಂತ ಎಷ್ಟು ಹೆಚ್ಚು ನೀಡಿದೆ ಮತ್ತು 2. ನಿರ್ದಿಷ್ಟ ಇಲಾಖೆ ಮತ್ತು ರಾಜ್ಯಗಳಿಗೆ ಹೋದ ವರ್ಷಕ್ಕಿಂತ ಎಷ್ಟು ಹೆಚ್ಚು ಒದಗಿಸಲಾಗಿದೆ ಎಂದು ಕಳೆದು ಕೂಡಿ ಜನರಿಗೆ ಮೋಡಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಎರಡು ಬೇರೆ ಬೇರೆ ಕಾಲಾವಧಿಯ ಬಜೆಟ್ಟುಗಳನ್ನು ಹೋಲಿಸುವಾಗ ಅದರಲ್ಲೂ ಯಾವ ಇಲಾಖೆಗೆ ಎಷ್ಟು ನೀಡಲಾಗಿದೆ ಅರ್ಥಾತ್ ಯಾವ ಕ್ಶೇತ್ರದ ಅಥವಾ ಯಾವ ಕ್ಶೇತ್ರದ ಯಾವ ವರ್ಗಕ್ಕೆ ಆದ್ಯತೆ ನೀಡಲಾಗದೆ ಎಂಬುದನ್ನು ಹೋಲಿಸಿ ಅರ್ಥಮಾಡಿಕೊಳ್ಳಬೇಕಾದರೆ ಹೋಲಿಸಬೇಕಿರುವದು Absolute Number ಅಂದರೆ ಒದಗಿಸಲಾದ ಮೊತ್ತವನ್ನು ಮಾತ್ರ ಅಲ್ಲ. ಬದಲಿಗೆ ಆ ಸರ್ಕಾರದ ನೈಜ ಆದ್ಯತೆ ಅರ್ಥ ಮಾಡಿಕೊಳ್ಳಲು ಆಯಾ ಕಾಲಘಟ್ಟದಲ್ಲಿ ಒದಗಿಸಲಾದ ಮೊತ್ತ ಆಯಾ ಬಜೆಟ್ಟಿನ ಗಾತ್ರದಲ್ಲಿ ಎಷ್ಟು ಪ್ರಮಾಣದ್ದು ಎಂದು ಹೋಲಿಸುವುದು ಸರಿಯಾದ ಲೆಕ್ಕಾಚಾರ .
ಅಂಕಿಸಂಕಿಗಳು ಬಚ್ಚಿಡುವ ಬಜೆಟ್ ದ್ರೋಹಗಳು..
ಉದಾಹರಣೆಗೆ ಮೊನ್ನೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಕ್ಕ 2004-14 ರ ಅವಧಿಯ UPA ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಅನುದಾನ, ಬೆಂಬಲ ಇತ್ಯಾದಿಗಳನ್ನು 2014-24 ರ ಅವಧಿಯಲ್ಲಿ ಮೋದಿ ಕೊಟ್ಟಿರುವ ಅನುದಾನಗಳಿಗೆ ಹೋಲಿಸಿ ಪತ್ರಿಕಾ ಗೋಷ್ಠಿ ಮಾಡಿದ್ದಾರೆ.. ಉದಾಹರಣೆಗೆ, UPA ಅವಧಿಯ ಹತ್ತುವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು 60 ಸಾವಿರ ಕೋಟಿ ನೆರವು ಸಿಕ್ಕಿದ್ದರೆ, ಮೋದಿಯ ಹತ್ತು ವರ್ಷಗಳಲ್ಲಿ 2.36 ಲಕ್ಷ ಕೋಟಿ ನೆರವು ಸಿಕ್ಕಿದೆ ಎಂದು ವಾದಿಸಿದ್ದಾರೆ. ಅಂದರೆ ಕರ್ನಾಟಕಕ್ಕೆ ಮೋದಿ ಅವಧಿಯಲ್ಲಿ UPA ಅವಧಿಗಿಂತ ನಾಲ್ಕು ಪಟ್ಟು ಜಾಸ್ತಿ ಕೊಟ್ಟಿದ್ದೇವೆ ಎಂಬುದು ನಿರ್ಮಲಕ್ಕನ ಗಣಿತ… ಇದು ಮೋದಿಯವರ 2ab ಅಲ್ಜಿಬ್ರಾ ದಷ್ಟೇ ಅಸಂಬದ್ಧ…ಗಣಿತ.. ದ್ರೋಹಪೂರಿತ ರಾಜಕೀಯ ಕಾಗುಣಿತ…
ಅಸಲು ಬಜೆಟ್ಟುಗಳ ಐತಿಹಾಸಿಕ ಹೋಲಿಕೆ ಮಾಡಬೇಕಿರುವುದು absolute number ಗಳಲ್ಲಿ ಅಲ್ಲ… ಆಯಾ ಬಜೆಟ್ಟುಗಳಲ್ಲಿ ಘೋಷಿತವಾಗುವ ನೆರವು ಅಂದಿನ ಬಜೆಟ್ಟಿನಲ್ಲಿ ಎಷ್ಟು ಪ್ರಮಾಣದ್ದು ಎಂಬುದು ಸರಿಯಾದ ಹೋಲಿಕೆ… ಸರಿಯಾದ ಲೆಕ್ಕಾಚಾರ.. ಉದಾಹರಣೆಗೆ, UPA ಅವಧಿಯ 2004-5 ರಲ್ಲಿ ಕೇಂದ್ರ ಬಜೆಟ್ಟಿನ ಗಾತ್ರ 5 ಲಕ್ಷ ಕೋಟಿ. 2014 ರ ವೇಳೆಗೆ ಅದು 14 ಲಕ್ಷ ಕೋಟಿ ಯಾಗಿತ್ತು. ಅಂದರೆ ಸರಾಸರಿ UPA ಅವಧಿಯ ಹತ್ತು ವರ್ಷಗಳಲ್ಲಿ ಸರಾಸರಿ ಬಜೆಟ್ಟಿನ ಗಾತ್ರ 10 ಲಕ್ಷ ಕೋಟಿ.
2019 ರಲ್ಲಿ ದೇಶದ ಬಜೆಟ್ ಗಾತ್ರ 27 ಲಕ್ಷ ಕೋಟಿಯಾಗಿ, 2024-25 ರಲ್ಲಿ ಬಜೆಟ್ ಗಾತ್ರ 48 ಲಕ್ಷ ಕೋಟಿಗಳನ್ನು ಮುಟ್ಟಿದೆ. ಅಂದರೆ ಮೋದಿ ಅವಧಿಯಲ್ಲಿ ಬಜೆಟ್ಟಿನ ಸರಾಸರಿ ಗಾತ್ರ 31 ಲಕ್ಷ ಕೋಟಿ. UPA ಅವಧಿಯ ಸರಾಸರಿಗಿಂತ ಮೂರು ಪಟ್ಟು ಜಾಸ್ತಿ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಬಜೆಟ್ ಯುಪಿಎ ಮೊದಲ ವರ್ಷಗಳಿಗಿಂತ 6-7 ಪಟ್ಟು ಜಾಸ್ತಿ. 2004-5 ಕ್ಕೆ ಹೋಲಿಸಿದರೆ ಕೇಂದ್ರ ಬಜೆಟ್ಟಿನ ಗಾತ್ರ ಹೆಚ್ಚು ಕಡಿಮೆ 10 ಪಟ್ಟು ಜಾಸ್ತಿ ಆಗಿದೆ… ಅರ್ಥತ್ ರಾಜ್ಯಗಳಿಂದ ಕೇಂದ್ರ ಪಡೆದುಕೊಳ್ಳುತ್ತಿರುವ ಆದಾಯವೂ 2004 ಕ್ಕೆ ಹೋಲಿಸಿದಲ್ಲಿ 10 ಪಟ್ಟು ಹೆಚ್ಚಿದೆ… ಹೀಗಾಗಿ UPA ಅವಧಿಯಲ್ಲಿ ರಾಜ್ಯಗಳಿಗೆ ಕೊಡುತ್ತಿದ್ದ ನೆರವನ್ನು 2004 ರ ಪ್ರಮಾಣಕ್ಕಿಂತ ಹತ್ತು ಪಟ್ಟುಗಿಂತ ಜಾಸ್ತಿ ಹೆಚ್ಚಿಸಿದ್ದರೆ ಮಾತ್ರ NDA ಅವಧಿಯಲ್ಲಿ ರಾಜ್ಯಗಳಿಗೆ ಮೋದಿ ಹೆಚ್ಚು ಕೊಟ್ಟಿದ್ದಾರೆ ಎಂಬ ನಿರ್ಮಲಕ್ಕನ ಮಾತಿನಲ್ಲಿ ನೈರ್ಮಲ್ಯ ಇರುತ್ತಿತ್ತು…
ಆದರೆ ಕರ್ನಾಟಕಕ್ಕೆ ದಕ್ಕಿರುವುದನ್ನೇ ನೋಡಿ… ನಿರ್ಮಲ ಸೀತಾರಾಮನ್ ಪ್ರಕಾರ UPA ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು 60 ಸಾವಿರ ಕೋಟಿ… 2014-24 ರ ಅವಧಿಯಲ್ಲಿ ಮೋದಿ ಬಜೆಟ್ಟು 2004 ಕ್ಕೆ ಹೋಲಿಸಿದರೆ 10 ಪಟ್ಟು, 2014 ಕ್ಕೆ ಹೋಲಿಸಿದರೆ 3 ಪಟ್ಟು ಹೆಚ್ಚಿದೆ. ಅಂದರೆ ಸರಾಸರಿ UPA ಬಜೆಟ್ಟಿನ ಗಾತ್ರಕ್ಕಿಂತ ಮೋದಿ ಬಜೆಟ್ಟಿನ ಗಾತ್ರ 6-7 ಪಟ್ಟು ಜಾಸ್ತಿ ಇತ್ತು ಎಂದಾದರೆ…. ಮೋದಿ ಅವಧಿಯ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟ ನೆರವು UPA ಅವಧಿಯ ಹತ್ತು ವರ್ಷಗಳಲ್ಲಿ ಕೊಟ್ಟ 60 ಸಾವಿರ ಕೋಟಿಗಿಂತ 6-7 ಪಟ್ಟು ಹೆಚ್ಚು…ಇರಬೇಕಲ್ಲವೇ?
ಅಂದರೆ 3.6 ಲಕ್ಷ – 4.2 ಲಕ್ಷ (60×6/7) ಕೋಟಿ ಕೊಟ್ಟಿದ್ದರೆ ಮಾತ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಕೊಟ್ಟಿದ್ದಾರೆ ಅಂತಾಗುತ್ತಿತ್ತು.. ಆದರೇ ನಿರ್ಮಲಕ್ಕನವರೇ ಬಯಲು ಮಾಡಿದಂತೆ ಕರ್ನಾಟಕಕ್ಕೆ ಮೋದಿ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಕೊಟ್ಟಿರುವುದು ಕೇವಲ 2.36 ಲಕ್ಷ ಕೋಟಿ ಮಾತ್ರ. (ಇದು ಕೂಡ ಪೂರ್ತಿ ಬಂದಿಲ್ಲ ಎನ್ನುವುದು ಮತ್ತೊಂದು ವಿಷಯ) ಅಂದರೆ ಕರ್ನಾಟಕಕ್ಕೆ ಕೇಂದ್ರದ ಬಜೆಟ್ ಗಾತ್ರದ ಏರಿಕೆಗೆ ಹೋಲಿಸಿದರೆ …ಕರ್ನಾಟಕದ ಪಾಲು 1-2 ಲಕ್ಷ ಕೋಟಿ ಕಡಿಮೆ ಆಗಿದೆ… ಅಷ್ಟು ಮಾತ್ರವಲ್ಲ, 2013-14 ರ ಸಾಲಿನಲ್ಲಿ ರಾಜ್ಯಕ್ಕೆ ಸಂದ ಎಲ್ಲಾ ಅನುದಾನ, ನೆರವು ಒಟ್ಟು ಅಂದಿನ UPA ಬಜೆಟ್ಟಿನ ಶೇ. 1.9 ರಷ್ಟು. ಆದರೆ 2024-25 ರಲ್ಲಿ ಅದು ಒಟ್ಟಾರೆ ಬಜೆಟ್ಟಿನ ಶೇ. 1.2ಕ್ಕಿಳಿದಿದೆ. UPA ಬಜೆಟ್ಟಿನಲ್ಲು ಕರ್ನಾಟಕಕ್ಕೆ ಸಿಕ್ಕಿದ್ದು ಕಡಿಮೆಯೇ . ಆದರೆ ಮೋದಿ ಬಜೆಟ್ ತೀರಾ ಅನ್ಯಾಯ ಮಾತ್ರವಲ್ಲ. ಕಡಿಮೆ ಕೊಟ್ಟರೂ ಜಾಸ್ತಿ ಕೊಟ್ಟೆವು ಎನ್ನುವ ಕುಟಿಲ ಕುತಂತ್ರದ ಪ್ರಚಾರ ಬೇರೇ..
*ಶೋಷಿತ ಸಮುದಾಯಗಳ ವೆಚ್ಚದಲ್ಲೂ ಕುತಂತ್ರವೇ!*
ಅದೇ ರೀತಿ ಬೇರೆಬೇರೆ ಕ್ಶೇತ್ರಗಳಿಗೂ ಮೋದಿ ಸರ್ಕಾರ ಅತಿ ಹೆಚ್ಚು ಹಣಕೊಟ್ಟಿದೆ ಎನ್ನುತ್ತಾ ನಿರ್ಮಲಕ್ಕ ಕೇವಲ ಹಣದ ಮೊತ್ತವನ್ನು ಮಾತ್ರ ಪ್ರಚಾರ ಮಾಡುತ್ತಿದ್ದಾರೆಯೇ ವಿನಾ ಒಟ್ಟಾರೆ ಬಜೆಟ್ಟಿನಲ್ಲಿ ಅದರ ಪ್ರಮಾಣವೆಷ್ಟು ಎಂಬುದನ್ನಲ್ಲ. ಉದಾಹರಣೆಗೆ ಈ ಬಜೆಟ್ಟಿನಲ್ಲಿ ಬಡವರು, ಅನ್ನದಾತರು, ಯುವಕರು ಮತ್ತು ಮಹಿಳೆಯರನ್ನು ಉದ್ಧಾರ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ನಿರ್ಮಲಕ್ಕ ಘೋಷಿಸಿದ್ದಾರೆ. ಹಾಗಿದ್ದಲ್ಲಿ ಹೋದ ವರ್ಷಗಳಿಗಿಂತ ಬಜೆಟ್ಟಿನಲ್ಲಿ ಈ ವರ್ಗಗಳಿಗೆ ಆದ್ಯತೆ ನೀಡಿದ್ದರೆ ಒಟ್ಟಾರೆ ಬಜೆಟ್ಟಿನಲ್ಲಿ ಈ ವರ್ಗಗಳಿಗೆ ನೀಡಿರುವ ಮೊತ್ತದ ಪ್ರಮಾಣವೂ ಹೋದ ವರ್ಷಗಳ ಬಜೆಟ್ಟಿನ ಪ್ರಮಾಣಕ್ಕಿಂತ ಹೆಚ್ಚಿರಬೇಕಲ್ಲವೇ? ಇದನ್ನು ಅರ್ಥ ಮಾಡಿಕೊಳ್ಳಲು ಉದಾಹರಣೆಗೆಂದು ಕೃಷಿಗೆ, ಶಿಕ್ಷಣಕ್ಕೆ, ಆರೋಗ್ಯಕ್ಕೆ 2024-25 ರ ಬಜೆಟ್ಟಿನಲ್ಲಿ ನೀಡಲಾಗಿರುವ ಪ್ರಮಾಣಾತ್ಮಕ ಅನುಪಾತವು , ಇದೇ ಮೋದಿ ಸರ್ಕಾರ 2019-20 ರಲ್ಲಿ ಒದಗಿಸಿದ ಬಜೆಟ್ ಪ್ರಮಾಣಕ್ಕಿಂತ ಹೆಚ್ಚಿದೆಯೇ ಎಂದು ಪರಿಶೀಲಿಸೋಣ .
2019 ರಲ್ಲಿ ಒಟ್ಟಾರೆ ಬಜೆಟ್ ಗಾತ್ರ 27.86 ಲಕ್ಷ ಕೋಟಿ ಹಾಗೂ 2024-25 ರಲ್ಲಿ ಬಜೆಟ್ ಗಾತ್ರ 48 ಲಕ್ಷ ಕೋಟಿ ಎಂದು ನೆನಪಿನಲ್ಲಿಡೊಣ. ಮೊದಲನೆಯದಾಗಿ ಕೃಷಿ. 2019 ರಲ್ಲಿ ಕೃಷಿಗೆ 1.35 ಲಕ್ಷ ಕೋಟಿ ಎತ್ತಿಡಲಾಗಿತ್ತು. 2024-25 ರಲ್ಲಿ 1.51 ಲಕ್ಷ ಕೋಟಿ ಎತ್ತಿಡಲಾಗಿದೆ. ಅಂದರೆ 2019ಕ್ಕೆ ಹೋಲಿಸಿದರೆ 16 ಸಾವಿರ ಕೋಟಿ ಜಾಸ್ತಿ ಕೊಡಲಾಗಿದೆ ಎಂಬಂತೆ ನಿರ್ಮಲಕ್ಕ ಹೇಳುತ್ತಾರೆ. ಆದರೆ 2019 ರಲ್ಲಿ ಕೃಷಿಗೆ ನೀಡಿದ ಮೊತ್ತ ಅಂದಿನ ಬಜೆಟ್ಟಿನ ಶೇ. 4.8 ರಷ್ಟು. 2024-25 ರ ಮೊತ್ತ ಬಜೆಟ್ಟನ ಕೇವಲ 3.1 ರಷ್ಟು . ಇದು ಇತರ ಕೃಷೀ ಸಂಬಂಧಿತ ಬಾಬತ್ತುಗಳಿಗೆ ಹೋಲಿಸಿದಲ್ಲಿ ಕೇವಲ ಶೇ. 2.75 ರಷ್ಟು ಮಾತ್ರ ಆಗುತ್ತದೆ. ಅಂದರೆ 2019 ಕ್ಕೆ ಹೋಲಿಸಿದಲ್ಲಿ ಕೃಷಿಗೆ ನೀಡಿರುವ ಆದ್ಯತೆ ಶೇ. 2.5 ರಷ್ಟು ಅಂದರೆ ಅರ್ಧಕ್ಕಿಂತ ಕಡಿಮೆ. ಆದರೂ ಮೋದಿ ಸರ್ಕಾರ ಕೃಷಿ ಪರ ಬಜೆಟ್ ಎಂಡು ಕೊಚ್ಚಿಕೊಳ್ಳುತ್ತದೆ.
2019 ರಲ್ಲಿ ಶಿಕ್ಷಣಕ್ಕೆ ನೀಡಿದ ಮೊತ್ತ 94854 ಕೋಟಿ. ಅದು ಅಂದಿನ ಬಜೆಟ್ ಪ್ರಮಾಣದ ಶೇ. 3.37 ರಷ್ಟು. 2024-25ರಲ್ಲಿ ಅದು 1.25 ಲಕ್ಷ ಕೋಟಿಗೇರಿದರೂ, ಅದು ಬಜೆಟ್ಟಿನ ಗಾತ್ರಕ್ಕೆ ಹೋಲಿಸಿದಲ್ಲಿ ಕೇವಲ 2.6 ಆಗುತ್ತದೆ. ಅಂದರೆ ನೈಜವಾಗಿ ಬಜೆಟ್ಟಿನ ವೆಚ್ಚದಲ್ಲಿ ಶಿಕ್ಷಣಕ್ಕೆ ಕೊಟ್ಟ ಆದ್ಯತೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಹಾಗೆಯೇ ಆರೋಗ್ಯಕ್ಕೆ 2019 ರಲ್ಲಿ ನೀಡಿದ ಮೊತ್ತ 64,999 ಕೋಟಿ. ಅದು ಅಂದಿನ ಬಜೆಟ್ಟಿನ ಶೇ. 2.2 ರಷ್ಟು. 2024 ರಲ್ಲಿ ಅರೋಗ್ಯದ ಮೇಲಿನ ವೆಚ್ಚ 89287 ಕೋಟಿಯಷ್ಟು ಎಂದು ಹೇಳುತ್ತಿದ್ದರೂ ಅದು ಇಂದಿನ ಬಜೆಟ್ಟಿನ ಶೇ. 1.8 ರಷ್ಟು ಮಾತ್ರ. ಹೀಗೆ ಬಜೆಟ್ಟನ ಪ್ರಮಾಣಕ್ಕೆ ಹೋಲಿಸಿ ಹೆಚ್ಚಳವನ್ನು ತುಲನೆ ಮಾಡಿದರೆ ಕಾರ್ಪೊರೇಟ್ ಗಳಿಗೆ ಅನುಕೂಲವಾಗುವ ಕ್ಶೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಶೇತ್ರಗಳಿಗೂ ಕೊಟ್ಟಿರುವ ಮೊತ್ತ ಬಜೆಟ್ ಅನುಪಾತದಲ್ಲಿ ಅರ್ಧಕ್ಕಿಂತ ಕಡಿಮೆಯೇ ಎಂಬುದು ಸಾಬೀತಾಗುತ್ತದೆ.
ಹಣದುಬ್ಬರ ಲೆಕ್ಕ ಹಿಡಿದರೆ ನೈಜ ಏರಿಕೆಯೆಷ್ಟು?
ಬಜೆಟ್ ಲೆಕ್ಕಾಚಾರದಲ್ಲಿ ಸರ್ಕಾಗಳು ಜನರಿಗೆ ಮಾಡುವ ಮೋಸ ಅಷ್ಟಕ್ಕೆ ನಿಲ್ಲುವುದಿಲ್ಲ. ಬಜೆಟ್ಟಿನಲ್ಲಿ ಯಾವದಾದಾರೂ ಕ್ಶೇತ್ರಕ್ಕೆ ಹೋದವರ್ಷಕ್ಕಿಂತ ಹೆಚ್ಚು ಹಣ ನೀಡಿದ ಮಾತ್ರಕ್ಕೆ ಅದು ನೈಜ ಹೆಚ್ಚಳವಾಗುವುದಿಲ್ಲ. ಆ ಹೆಚ್ಚಳವು ಆ ಸಾಲಿನ ಹಣದುಬ್ಬರದ ಪ್ರಮಾಣವನ್ನು ಕಳೆದು ಹೆಚ್ಚಾಗಿದ್ದರೆ ಮಾತ್ರ ನೈಜವಾಗಿಯೂ ಹೋದವರ್ಷಕ್ಕಿಂತ ನೀಡಿರುವ ಮೊತ್ತ ಹೆಚ್ಚಾಗಿದೆ ಎಂದರ್ಥ.
ಉದಾಹರಣೆಗೆ 2023-24 ರ ಸಾಲಿನಲ್ಲಿ ಶಿಶು ಕಲ್ಯಾಣಕ್ಕೆ 1000 ಕೋಟಿ ಕೊಟ್ಟಿದ್ದಾರೆ ಎಂದಿಟ್ಟಕೊಳ್ಳಿ. ಈ ಸಾಲಿನಲ್ಲಿ 1050 ಕೋಟಿ ಹಣ ಒದಗಿಸಿ ಶೇ. 5 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರಗಳು ಹೇಳುತ್ತವೆ. ಆದರೆ ಈ ಸಾಲಿನಲ್ಲಿ ಹಣದುಬ್ಬರ ಶೇ. 5 ರಷ್ಟಿರುವಾಗ ಹೋದವರ್ಷದ 1000 ಕೋಟಿ ಈ ವರ್ಷದ 1050 ಕೋಟಿಗೆ ಸಮ ಎಂದರ್ಥ. ಅಂದರೆ ಈ ವರ್ಷ ಹೋದವರ್ಷಕ್ಕಿಂತ 50 ಲೋಟಿ ಹೆಚ್ಚು ಕೊಟ್ಟಿದ್ದರೂ ಹಣದುಬ್ಬರವೇ ಶೇ. 5 ರಷ್ಟಿರುವುದರಿಂದ ಅದು ನೈಜ ಹೆಚ್ಚಳವಾಗಿರುವುದಿಲ್ಲ. ಆದ್ದರಿಂದ ಅದು ನಿರ್ಮಲಕ್ಕನ ಕೇವಲ ಅಂಕಿ ಸಂಖ್ಯೆಯ ಗಾರುಡಿ ಮಾತ್ರ.
ಆದ್ದರಿಂದ ಒಂದು ರಾಜ್ಯಕ್ಕೆ ಅಥವಾ ಒಂದು ಇಲಾಖೆಗೆ ಹೋದವವರ್ಷಕ್ಕಿಂತ ಜಾಸ್ತಿ ಅನುದಾನ ಎಂದು ಘೋಷಿಸಿದಾಗ ಅದು ಹೋದವರ್ಷಕ್ಕಿಂತ ಶೇ.10-15 ಇದ್ದರೆ ಮಾತ್ರ ನಿಜಕ್ಕೂ ಸರ್ಕಾರ ಅದನ್ನು ಕನಿಷ್ಟ ಆದ್ಯತೆಯಲ್ಲಿ ಪರಿಗಣಿಸಿದೆ ಎಂದರ್ಥ. ಆಂಧ್ರ, ಬಿಹಾರ ಹೊರತು ಪಡಿಸಿ ಇತರ ರಾಜ್ಯಗಳಿಗೆ ಮತ್ತು ಕಾರ್ಪೊರೇಟ್ ಕ್ಶೇತ್ರಗಳನ್ನು ಹೊರತುಪಡಿಸಿ ಇತರ ಕ್ಶೇತ್ರಗಳಿಗೆ ನಿರ್ಮಲಕ್ಕ ಘೋಷಿಸಿರುವ ನಿಧಿಗಳು ಶೇ.5-10 ರ ಒಳಗಿವೆ. ಆರ್ಥಾತ್ ನೈಜ ಹೆಚ್ಚಳ ಮಾಡಿಯೇ ಇಲ್ಲ. ಇದಲ್ಲದೆ ಒದಗಿಸಲಾಗಿರುವ ಅಷ್ಟೂ ಹಣವನ್ನು ವರ್ಷದ ಅಂತಿಮ ವೇಳೆಗೆ , ವಿಶೇಷವಾಗಿ ಕೃಷಿ ಮತ್ತಿತರ ಸಾಮಾಜಿಕ ಕ್ಶೇತ್ರಗಳಿಗೆ ಒದಗಿಸಿರವುದೇ ಇಲ್ಲ. ಅಥವಾ ಒದಗಿಸಿದಷ್ಟು ಹಣವನ್ನು ಇಲಾಖೆ ವೆಚ್ಚ ಮಾಡಿರಲು ಬಿಟ್ಟಿರುವುದೂ ಇಲ್ಲ.
ಹೀಗಾಗಿ ಬಜೆಟ್ ದಸ್ತಾವೇಜುಗಳಲ್ಲಿ Budget Estimate ಎಂಬುದು ಈ ಸಾಲಿನಲ್ಲಿ ಎಷ್ಟು ವೆಚ್ಚ ಮಾಡುತ್ತೇವೆ ಎಂಬ ಅಂದಾಜಾಗಿರುತ್ತದೆ. ಅದರ ಜೊತೆಗೆ ಕೊಡುವ ಹೋದವರ್ಶದ ಅಸಲಿ ವೆಚ್ಚದ Revised Estimate ಮತ್ತು Actuals ಗಳೆ ಸರ್ಕಾರ ಎಷ್ಟು ವೆಚ್ಚ ಮಾಡಿದ್ದು ಎಬುದು ಅಧಿಕೃತ ನಿಜವಾಗಿರುತ್ತದೆ. ಸಾಮಾನ್ಯವಾಗಿ Budget Estimate ಮತ್ತು Actuals ಗಳ ನಡುವೆ ಏನಿಲ್ಲವೆಂದರೂ ಶೇ.10-30 ರಷ್ಟು ವ್ಯತ್ಯಾಸವಿರುತ್ತದೆ. ಅಂದರೆ ಸರ್ಕಾರದ ಘೋಷಣೇ ಮಾಡುವ ವೆಚ್ಚಕ್ಕಿಂತ ಕನಿಷ್ಟ ಎಂದರೆ ಶೇ. 20 ರಷ್ಟು ಕಡಿಮೆ ಆದ್ಯತೆ ನೀಡಲಾಗಿರತ್ತದೆ. ಆದ್ದರಿಂದ ಬಜೆಟ್ಟನ್ನು ಅರ್ಥ ಮಾಡಿಕೊಳ್ಳುವಾಗ ನಿರ್ಮಲಕ್ಕನ ಮಾತುಗಳಿಗಂತ ಹೋಲಿಕೆಯಲ್ಲಿ ಅಂಕಿಸಂಖ್ಯೆಗಳು ಹೇಳುವ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು. ಅದು ಮೋದಿ ಸರ್ಕಾರ ಕುಟಿಲ ಕುತಂತ್ರಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ಸ್ಪಷ್ಟವಾಗಿ ಸಾರಿ ಸಾರಿ ಹೇಳುತ್ತಿದೆ.
– ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply