ವಯನಾಡ್ : ದೇವರನಾಡು ಕೇರಳದ ವಯನಾಡಿನ ಮುಂಡಕೈ ಎಂಬ ಪ್ರದೇಶದಲ್ಲಿ ವ್ಯಾಪಕವಾಗಿರುವ ಚಹಾ, ಕಾಫಿ ಮತ್ತು ಏಲಕ್ಕಿ ಎಸ್ಟೇಟುಗಳಿವೆ. ಈ ಎಸ್ಟೇಟುಗಳಲ್ಲಿ ಕೆಲಸ ಮಾಡಲು ನೂರಾರು ಮಂದಿ ಕಾರ್ಮಿಕರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ಬರುತ್ತಾರೆ. ಇವರಲ್ಲಿ ಸುಮಾರು 600 ಮಂದಿ ವಲಸೆ ಕಾರ್ಮಿಕರು ಸ್ಥಳೀಯ ಹ್ಯಾರಿಸನ್ ಮಲಯಾಳಿ ಪ್ಲಾಂಟೇಶನ್ ಲಿಮಿಟೆಡ್ನಲ್ಲಿ ಕೆಲಸ ಮಾಡಲು ಬಂದಿದ್ದರು. ಇವರೆಲ್ಲರೂ ಮುಂಡಕೈಯಲ್ಲಿ ವಾಸವಾಗಿದ್ದರು.
ಇದೀಗ ಅಲ್ಲಿ ಭಯಾನಕ ಭೂಕುಸಿತದ ವಿಷಾದ ಘಟನೆಯ ನಂತರ ಅವರ ಸುಳಿವು ಪತ್ತೆಯಾಗದ ಕಾರಣ ಅಧಿಕಾರಿಗಳು ಸೇರಿದಂತೆ ಅವರ ಎಲ್ಲಾ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಂಪನಿಯ ಜನರಲ್ ಮ್ಯಾನೇಜರ್ ಬೆನಿಲ್ ಜೋನ್ಸ್ ಅವರು ಕಾರ್ಮಿಕರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ನಮ್ಮ ಕೆಲಸಗಾರರನ್ನು ಇದುವರೆಗೂ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಜೋನ್ಸ್ ಹೇಳುತ್ತಾರೆ. ಮೊಬೈಲ್ ನೆಟ್ವರ್ಕ್ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ದುರಂತ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಬಹುತೇಕ ಶವಗಳು ಮಲ್ಲಪ್ಪುರಂ ಚಾಲಿಯಾರ್ ನದಿಯಲ್ಲಿ ತೇಲುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಪಘಡ ನಡೆದ ಸ್ಥಳದಿಂದ ಬಹಳ ದೂರದಲ್ಲಿ ಸುಮಾರು 11 ಮೃತ ದೇಹಗಳು ಪತ್ತೆಯಾಗಿವೆ. ಅರಣ್ಯ ಪ್ರದೇಶದೊಳಗೆ ಐದು ಮೃತದೇಹಗಳು ಕೊಚ್ಚಿ ಬಂದಿವೆ ಎಂದು ಸ್ಥಳೀಯ ಆದಿವಾಸಿಗಳು ತಿಳಿಸಿದ್ದಾರೆ. ಶಾಸಕ ಐ.ಸಿ.ಬಾಲಕೃಷ್ಣನ್ ಕೂಡ ನದಿಯಲ್ಲಿ ಹಲವು ಮೃತದೇಹಗಳು ತೇಲುತ್ತಿವೆ ಎಂದು ಹೇಳಿದ್ದಾರೆ. ಕಲಪೆಟ್ಟಾ ಶಾಸಕ ಟಿ.ಸಿದ್ದಯ್ಯ ಮಾತನಾಡಿ, ಮುಂಡಕೈ ಗ್ರಾಮದಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂದರು.




Leave a reply