ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಭಾರೀ ಮಳೆಗೆ ಮಲೆನಾಡು ತತ್ತರಿಸಿದೆ. ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ತುಂಗಾ ನದಿ ನೀರು ಹರಿಯುತ್ತಿದೆ. ನದಿಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಸಂಚಾರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ದಿಢೀರ್ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತ ಮಲೆನಾಡು ಭಾಗದ 5 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದ್ದು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್. ಆರ್. ಪುರ ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ರಜೆ ನೀಡುವಂತೆ ಆದೇಶಿಸಿದ್ದಾರೆ.
ಮಳೆಯಿಂದಾಗಿ ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿಯ ಅಬ್ಬರ ಹೆಚ್ಚಾಗಿದೆ. ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದೆ. ಅಂಗಡಿ, ಮಳಿಗೆಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಯಾಗಿದೆ. ಶೃಂಗೇರಿ ಪಟ್ಟಣದಲ್ಲಿ ಮತ್ತೆ ತುಂಗಾ ನದಿ ಪ್ರವಾಹದಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಸುಮಾರು 20ಕ್ಕೂ ಹೆಚ್ಚು ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಭದ್ರಾ ನದಿಯ ಪ್ರವಾಹದಿಂದ ಬಾಳೆಹೊನ್ನೂರು ಪಟ್ಟಣ ಮುಳುಗಡೆಯಾಗಿದೆ. ದೋಬಿ ಹಳ್ಳದ ಪ್ರವಾಹದಿಂದ ಶಾಲೆ, ಅಂಗಡಿ-ಮುಂಗಟ್ಟುಗಳು, ಮೀನು ಮಾರುಕಟ್ಟೆ, ಸಂತೆ ಮೈದಾನ ಜಲಾವೃತಗೊಂಡಿದೆ. ಭದ್ರಾ ನದಿಯ ಪ್ರವಾಹದಿಂದ ದೋಬಿ ಹಳ್ಳ ತುಂಬಿದ್ದು, ಬಾಳೆಹೊನ್ನೂರಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ, ಅಡಿಕೆ ತೋಟಗಳು ಸಂಪೂರ್ಣ ಜಲಾವೃತವಾಗಿದ್ದು, ಭಾರೀ ಮಳೆಯಿಂದಾಗಿ ಭದ್ರಾ ನದಿ ಪಾತ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ.
Leave a reply