ಮುಂಬಯಿ : ಕುಬೇರನಾದ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭ ಸಂಪತ್ತಿನ ಕೊಳಕು ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಮೂರು ಹಂತದ ಮದುವೆ ಸಮಾರಂಭಕ್ಕೆ ಬರೋಬರಿ ಐದು ಸಾವಿರ ಕೋಟಿ ರೂಪಾಯಿ (675 ಮಿಲಿಯನ್ ಡಾಲರ್) ಖರ್ಚಾಗಿದೆ ಎಂದು ಅಂಬಾನಿ ಕುಟುಂಬದ ಮೂಲಗಳು ತಿಳಿಸಿವೆ. ರಿಲಯನ್ಸ್ ಮಾತ್ರ ತನ್ನ ವಾರ್ಷಿಕ ಆದಾಯದಲ್ಲಿ ಶೇ. 0.5 ಅನ್ನು ಮಾತ್ರವೇ ಈ ಆಚರಣೆಗೆ ಖರ್ಚು ಮಾಡಿದೆ ಎಂದು ಹೇಳಿದೆ.
ಹಿಂದಿನ ಕಾಲದ ರಾಜರು ಇಂತಹ ಆರ್ಭಟಗಳನ್ನು ಮಾಡುತ್ತಿದ್ದರು. ತಮ್ಮ ಸಂಪತ್ತಿನ ಹೆಮ್ಮೆಯನ್ನು ಪ್ರದರ್ಶಿಸಲು ಯತ್ನಿಸುತ್ತಿದ್ದರು ಎಂದು ಇತಿಹಾಸಕಾರರು ಹೇಳುವುದನ್ನು ಕೇಳಿದ್ದೇವೆ. ಆದರೆ, ಇಂದು ನೇರವಾಗಿ ನೋಡುತ್ತಿದ್ದೇವೆ. ರಾಜರ ಪ್ರಭುತ್ವ ಹೋದ ಮೇಲೂ ಕೊಳಕು ಸಂಸ್ಕೃತಿ ಮುಂದುವರೆದಿದೆ ಎನ್ನುವುದಕ್ಕೆ ಅಂಬಾನಿ ಮಗನ ಮದುವೆಯೇ ಸಾಕ್ಷಿಯಾಗಿದೆ. 1633 ರಲ್ಲಿ ಮೊಘಲ್ ರಾಜ ಷಹಜಹಾನ್ ಅವರ ಹಿರಿಯ ಮಗ ದಾರಾಶುವಿನ ಮದುವೆಗೆ 32 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬುದು ಪ್ರತೀತಿ. ಅಂದರೆ ಇಂದಿನ ಬೆಲೆಯಲ್ಲಿ 48 ಮಿಲಿಯನ್ ಡಾಲರ್ಗಳಷ್ಟು.
ಅಂದರೆ ಮುಖೇಶ್ ಅಂಬಾನಿ ಮಗನ ಮದುವೆಗೆ ಷಹಜಹಾನ್ ಮಗನ ಮದುವೆಗಿಂತ 20 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ.
ಮೂರು ಹಂತಗಳಲ್ಲಿ ಕೊನೆಯದಾದ ವಿವಾಹ ಸಮಾರಂಭವು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೂರು ದಿನಗಳ ಕಾಲ ನಡೆಯಲಿದೆ. ಸಮಾರಂಭದಲ್ಲಿ ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ನ ಟಾಪ್ ಕ್ಲಾಸ್ ನಟ-ನಟಿಯರು ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು.
Leave a reply