ಲಕ್ನೋ : ಮೂವರು ವ್ಯಕ್ತಿಗಳು ದಲಿತ ಬಾಲಕನಿಗೆ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. 15 ವರ್ಷದ ದಲಿತ ಬಾಲಕ, ಆತನ ಕುಟುಂಬ ಗ್ರಾಮದಲ್ಲಿ ಡಿಜೆ ನಡೆಸುತ್ತಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೌಂಡ್ ಮತ್ತು ಆಡಿಯೊ ವ್ಯವಸ್ಥೆಗಳನ್ನು ಮಾಡುತ್ತಾರೆ.
ಈ ನಡುವೆ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಕ ಡಿಜೆ ಹಾಕಿದ್ದಾನೆ. ಆದರೆ ಜನರೇಟರ್ ನಲ್ಲಿ ಇಂಧನ ಖಾಲಿಯಾಗಿದ್ದರಿಂದ ಡಿಜೆ ನಿಂತಿತ್ತು. ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಮೂವರು ಆತನೊಂದಿಗೆ ಜಗಳವಾಡಿದ್ದಾರೆ. ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕನನ್ನು ತಡೆದು ಥಳಿಸಿದ್ದಾರೆ. ಮದ್ಯದ ಬಾಟಲಿಯಲ್ಲಿ ಮೂತ್ರ ಮಾಡಿ ಬಲವಂತವಾಗಿ ಕುಡಿಸಿದ್ದರು. ಅದನ್ನು ವಿಡಿಯೋ ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿತ್ತು.
ನಂತರ, ಬಾಲಕ ಮನೆಗೆ ತಲುಪಿ ತನ್ನ ಕುಟುಂಬಕ್ಕೆ ಈ ವಿಷಯವನ್ನು ಹೇಳಿದ್ದಾನೆ. ಮರುದಿನ ಆತನ ಪೋಷಕರು ಮತ್ತು ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಕಿಶನ್ ತಿವಾರಿ, ದಿಲೀಪ್ ಮಿಶ್ರಾ ಮತ್ತು ಸತ್ಯಂ ತಿವಾರಿ ಅವರನ್ನು ಗುರುವಾರ ಬಂಧಿಸಿದ್ದಾರೆ. ದಿಲೀಪ್ ಮಿಶ್ರಾ ಮದ್ಯದ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ಯಂ ಹಾಗೂ ಕಿಶನ್ ಸೇರಿ ದಲಿತ ಬಾಲಕನ ಬಾಯಿಗೆ ಬಾಟಲಿ ಇಟ್ಟು ಬಲವಂತವಾಗಿ ಮೂತ್ರ ಕುಡಿಸಿರುವುದಾಗಿ ಹೇಳಿದ್ದಾರೆ. ವಿಡಿಯೋ ಕ್ಲಿಪ್ ವೀಕ್ಷಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
Leave a reply