ಭಾರತವು ಸೇರಿದಂತೆ ಪ್ರಪಂಚದಾದ್ಯಂತ ಫ್ಯಾಸಿಸ್ಟ್ ಆಡಳಿತವನ್ನು ಹೇರುವುದರ ಹಿಂದೆ ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ಶಕ್ತಿಗಳ ಕೈವಾಡವಿದೆ. ಕಳೆದ ಹತ್ತು ವರ್ಷಗಳಲ್ಲಿ ಜಗತ್ತಿನ ಜನರ ರಾಜಕೀಯ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಆರೋಪಿಸಿದೆ.
ಭಾರತ ದೇಶವು ಇದಕ್ಕೆ ಸುಪ್ರೀಂ ಸಾಕ್ಷಿಯಾಗಿದೆ. ದೇಶದ ಸಂಪತ್ತು, ಶ್ರಮಶಕ್ತಿ, ಸಾರ್ವಭೌಮತೆ ಹಾಗೂ ಸ್ವಾವಲಂಬನೆಯನ್ನು, ಅಂತರಾಷ್ಟ್ರೀಯ ಹಣಕಾಸು ಶಕ್ತಿಗಳಿಗೆ ಧಾರೆ ಎರೆಯುವ ನವ ಉದರವಾದಿ ಆರ್ಥಿಕ ನೀತಿಗಳ ಆರಾಧನೆ ದೇಶದಲ್ಲಿ ಮುಂದುವರೆದಿದೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿಯೆ ಜಾರಿಗೆ ತಂದ ಖಾಸಗಿಕರಣ, ಉದಾರೀಕರಣ ಹಾಗೂ ಜಾಗತೀಕರಣ ಎಂಬ ದೇಶ ವಿರೋಧಿ ಸಾಮ್ರಾಜ್ಯಶಾಹಿ ಪರ ಆರ್ಥಿಕ ನೀತಿಗಳನ್ನೆ ಮೋದಿ ಸರ್ಕಾರ ಮುಂದುವರಿಸಿದೆ. ದೇಶದ ಸಾರ್ವತ್ರಿಕ ಕ್ಷೇತ್ರಗಳ ಖಾಸಗಿಕರಣ ಹಾಗೂ ಮಾರಾಟ, ವಿದೇಶಿ ಬಂಡವಾಳದ ಹೂಡಿಕೆಗೆ ಬಾರಿ ರಿಯಾಯಿತಿ, ಹೂಡಿಕೆದಾರರ ಹುಕುಂನಂತೆ ಕಾರ್ಮಿಕ ವರ್ಗದ ಕೂಲಿಯ ಕುಸಿತಕ್ಕಾಗಿ ಹೊಸ ಕಾರ್ಮಿಕ ಕಾಯ್ದೆಗಳು. ಎಲ್ಲಿ ನೋಡಿದರಲ್ಲಿ ಕಾರ್ಮಿಕರ ಗುಳೆ ಗಾರಿಕೆ ಹಾಗೂ ಗುತ್ತಿಗೆ ಕಾರ್ಮಿಕ ಪದ್ಧತಿಗಳು, ದೇಶ ಕಟ್ಟಿದ ಕಾರ್ಮಿಕರೇ ದೇಶದಲ್ಲಿ ಪರದೇಶಿಗಳು. ರಾಕೇಟ್ ವೇಗದಲ್ಲಿ ಬೆಳೆಯುತ್ತಿರುವ ನಿರುದ್ಯೋಗ. ದೇಶದ ಲಕ್ಷಾಂತರ ಸಣ್ಣ ಮಧ್ಯಮ ಹಾಗೂ ಸಾರ್ವತ್ರಿಕ ಕಾರ್ಖಾನೆಗಳಿಗೆ ಬೀಗ ಮುದ್ರೆ! ಹಾಗೆಯೆ,ದೇಶದ ರೈತ ವರ್ಗದ ಶತಮಾನದ ಬೇಡಿಕೆಯಾದ ಉಳುವವನೇ ಭೂಮಿಯ ಒಡೆಯ ಎಂಬ ಕಾರ್ಯಕ್ರಮಕ್ಕೆ ತಿಲಾಂಜಲಿ ಇಡಲಾಗಿದೆ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಭೂಮಿಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಭೂಕಬಳಿಕೆ ಮಾಫಿಯಾಗಳಿಗೆ ಬಿಟ್ಟುಕೊಡುವ ಕಾನೂನು ತರಲಾಗಿದೆ. ಜೊತೆಗೆ, ಕೃಷಿ ಉತ್ಪನ್ನಗಳ ಬೆಲೆ ನಿಗದಿಗಾಗಿ ಕಾನೂನು ಸಂರಕ್ಷಣೆ ಬೇಕೆಂಬ ರೈತ ಹೋರಾಟವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತಿದೆ. ರೈತರ ಭೂಮಿಗಳನ್ನು ಬಲತ್ಕಾರದಿಂದ ಸ್ವಾಧಿನಪಡಿಸಿಕೊಳ್ಳಲಾಗುತ್ತಿದೆ. ಆದಿವಾಸಿಗಳ ಹಾಗೂ ಕೊಳಗೇರಿ ನಿವಾಸಿಗಳ ಎತ್ತಂಗಡಿ ದೇಶದಲ್ಲಿ ವ್ಯಾಪಕವಾಗಿ ಮುಂದುವರೆದಿದೆ. ಇಡೀ ಕೃಷಿರಂಗವೇ ಕಾರ್ಪೊರೇಟ್ ಲೂಟಿಯ ತಾಣವಾಗಿ ಮಾರ್ಪಟ್ಟಿದೆ. ಮತ್ತೊಂದೆಡೆ, ದಲಿತ ಹಾಗೂ ದುರ್ಬಲ ಜನಾಂಗಗಳ ಮೇಲಿನ ದಮನ ದಬ್ಬಾಳಿಕೆಗಳಿಗಳನ್ನು ಸಮರ್ಥಿಸಲು ಕಾನೂನುಗಳನ್ನು ರೂಪಿಸಲಾಗಿದೆ. ಜಾತಿ ಹಾಗೂ ಅಸ್ಪೃಶ್ಯತೆಯನ್ನು ಹಿಂದೂ ರಾಷ್ಟ್ರದ ಹೆಸರಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ. ನಾಗರಿಕ ತಿದ್ದುಪಡಿ ಕಾಯ್ದೆ, ಸಮಾನ ನಾಗರಿಕ ಕಾಯ್ದೆ, ಮೀಸಲಾತಿಯ ರದ್ದತಿ, ಧಾರ್ಮಿಕ ಸ್ವಾತಂತ್ರ್ಯದ ಹರಣ ಮುಂತಾದ ಫ್ಯಾಸಿಸ್ಟ್ ದಾಳಿಗಳು ದೇಶದ ಮುಸಲ್ಮಾನರು ಹಾಗೂ ಮತ್ತಿತರೆ ಜನಾಂಗಗಳನ್ನು ಅತ್ಯಂತ ಭಯಾನಕ ಜೀವನ ಸ್ಥಿತಿಗೆ ತಂದು ನಿಲ್ಲಿಸಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಭಾರತದ ಸ್ವಾತಂತ್ರ್ಯ ವೀರರು ಮಾಡಿದ ಅಪಾರವಾದ ತ್ಯಾಗ ಬಲಿದಾನಗಳನ್ನು ಅಪಹಾಸ್ಯ ಮಾಡುವ ಪರಿಸ್ಥಿತಿ ದೇಶದಲ್ಲಿ ಎದ್ದು ನಿಂತಿದೆ. ಹಾಗಾಗಿ ಭಾರತದ ಜನತೆಯ ಪಾಲಿನ ಸ್ವಾತಂತ್ರ್ಯ ಇನ್ನೂ ಗಗನ ಕುಸುಮವಾಗಿದೆ. 1947ರಲ್ಲಿ ಆದದ್ದು ಅಧಿಕಾರ ಹಸ್ತಾಂತರವೇ ಹೊರತು ಭಾರತದ ಸ್ವಾತಂತ್ರ್ಯವಲ್ಲ. ಭಾರತದ ದೊಡ್ಡ ಬಂಡವಾಳ ಶಾಹಿಗಳು, ದೊಡ್ಡ ಭೂಮಾಲೀಕರು, ಮೇಲ್ಜಾತಿ- ಮೇಲ್ವರ್ಗದವರು 1947 ರ ಸ್ವಾತಂತ್ರ್ಯದ ಸೂಪರ್ ಫಲಾನುಭವಿಗಳಾಗಿದ್ದಾರೆ. ಕಾರ್ಮಿಕರು, ರೈತರು, ದಲಿತರು, ಆದಿವಾಸಿಗಳು ಮಹಿಳೆಯರು ಸೇರಿ ಬಹುಸಂಖ್ಯಾತ ಭಾರತೀಯರ ಪಾಲಿಗೆ ಇದು ಕಪಟ ಸ್ವಾತಂತ್ರವಾಗಿದೆ ಎಂದು ಕಿಡಿಕಾರಿದರು.
ಹಾಗಾಗಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ಕೇಂದ್ರ ಸಮಿತಿಯು ಆಗಸ್ಟ್ 15ರಂದು ದೇಶದಾದ್ಯಂತ ಸಾಮ್ರಾಜ್ಯಶಾಹಿ ವಿರೋಧಿ ದಿನಾಚರಣೆಗೆ ಕರೆ ನೀಡಿದೆ. ಈ ಕರೆಯ ಭಾಗವಾಗಿ ಪಕ್ಷವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆಗಸ್ಟ್ 15ರಂದು ಸಾಮ್ರಾಜ್ಯಶಾಹಿ ವಿರೋಧಿ ದಿನವನ್ನು ಆಚರಿಸಲಿದೆ ಎಂದು ತಿಳಿಸಿದರು.
ಸಾಮ್ರಾಜ್ಯಶಾಹಿ ಮುಕ್ತ ಭಾರತಕ್ಕಾಗಿ, ಪ್ರಪಂಚ ಬ್ಯಾಂಕ್, ಐಎಂಎಫ್ ಮುಕ್ತ ಭಾರತಕ್ಕಾಗಿ, ಖಾಸಗಿಕರಣ ಉದಾರಿಕರಣ ಜಾಗತೀಕರಣ ಮುಕ್ತ ಭಾರತಕ್ಕಾಗಿ, ಜಾತಿ ಮುಕ್ತ ಭಾರತಕ್ಕಾಗಿ, ಮನುವಾದ ಮುಕ್ತ ಭಾರತಕ್ಕಾಗಿ, ಗಂಡಾಳಿಕೆ ಮುಕ್ತ ಭಾರತಕ್ಕಾಗಿ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದರು. ಇದರೊಂದಿಗೆ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ನಿರಂತರಗೊಳಿಸುವ ಹೊಣೆಗರಿಕೆಯು ಭಾರತದ ದುಡಿಯುವ ವರ್ಗ ಹಾಗೂ ದಮನಿತ ಜನಗಳ ಭುಜದ ಮೇಲಿದೆ ಎಂದರು. ಹಾಗಾಗಿ, ಸಾಮ್ರಾಜ್ಯಶಾಹಿ ಪರ ಆರ್ಥಿಕ ನೀತಿಗಳನ್ನು ತಲೆ ಮೇಲೆ ಹೊತ್ತು, ದೇಶದ ಜನತೆಯ ಎಲ್ಲಾ ಹಿತಗಳನ್ನು ಬಲಿಕೊಡುತ್ತಿರುವ ಬಿಜೆಪಿ ಕಾಂಗ್ರೆಸ್ ಹಾಗೂ ನಕಲಿ ಕಮ್ಯುನಿಸ್ಟ್ ಪಕ್ಷ ಸಿಪಿಐ(ಎಂ)ಗಳ ಬೂಟಾಟಿಕೆಯ ಸ್ವಾತಂತ್ರ್ಯವನ್ನು ವಿರೋಧಿಸಿ, ಭಾರತದ ನೈಜ ಸ್ವಾತಂತ್ರ್ಯಕ್ಕಾಗಿ ಈ ಚಳುವಳಿಯಲ್ಲಿ ಭಾಗವಹಿಸಬೇಕೆಂದು ಸಿಪಿಐ (ಎಂಎಲ್) ಕರೆ ಕೊಟ್ಟಿದೆ.
Leave a reply