ಬಿಜೆಪಿಯ ಸಹವಾಸ ಹೆಚ್ಚಾದ ಮೇಲೆ ಜೆಡಿಎಸ್ ಮತ್ತು ಅದರ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಗಿಂತ ದುರಹಂಕಾರಿ, ಫ಼್ಯೂಡಲ್ ಮತ್ತು ಕೋಮುವಾದಿಯಾಗುತ್ತಿರುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಅದಕ್ಕೆ ದೊಡ್ಡ ಉದಾಹರಣೆ ಜೂನ್ 23 ರಂದು ಅವರು ಚನ್ನಪಟ್ಟಣದಲ್ಲಿ ನೀಡಿರುವ ಹೇಳಿಕೆ. ಮುಸ್ಲಿಮರಿಗೆ ತಮ್ಮ ತಂದೆ ಹಾಗೂ ತಾನೊ ಮೀಸಲಾತಿ ಸೌಲಭ್ಯ ನೀಡಿದರೂ ತಮ್ಮ ಮಗನಿಗೆ ರಾಮನಗರ ಚುನಾವಣೆಯಲ್ಲಿ ಮೋಸ ಮಾಡಿದರು ಎಂದು ದೊರ್ರಿದ್ದಾರೆ. ಇದು ಈಗ ದೇಶಾದ್ಯಂತ ಬಿಜೆಪಿಗಳು ತಮ್ಮ ಸೋಲಿಗೆ ಮುಸ್ಲಿಮರನ್ನು ದೂರುತ್ತಿರುವ ಕೋಮುವಾದಿ ಹುನ್ನಾರದ ಭಾಗವೂ ಆಗಿದೆ. ಅಷ್ಟು ಮಾತ್ರವಲ್ಲ. ಒಬ್ಬ ಜನಪರ ರಾಜಕಾರಣಿಗೆ ಸೋಲು ಆತ್ಮವಿಮರ್ಶೆಗೆ ಮತ್ತು ಬದಲಾವಣೆಗೆ ಒಂದು ಅವಕಾಶವಾಗಬೇಕು. ಎಚ್ಡಿಕೆ ಗೆ ಆದರೆ ಮುಸ್ಲಿಮರಿಗೆ ಏಕೆ ತಮ್ಮ ಮೇಲೆ ವಿಶ್ವಾಸ ಇಡುತ್ತಿಲ್ಲ ಎಂದು ಪ್ರಾಮಾಣಿಕವಾಗಿ ಚಿಂತನೆಗೆ ಹಚ್ಚಬೇಕಿತ್ತು. ಅದರ ಬದಲಿಗೆ ರಾಮನಗರದ ಸೋಲು ಅವರನ್ನು ಮತ್ತು ಅವರ ಪಕ್ಷದ ಮೇಲ್ ಸ್ಥರದ ನಾಯಕಮಣಿಗಳಲ್ಲಿ ಅಂತರ್ಧಾರೆಯಾಗಿ ಹರಿಯುತ್ತಿದ್ದ ಬ್ರಾಹ್ಮಣವಾದಿ ಹಿಂದೂತ್ವದ ಧಾರೆಯನ್ನು ಗಟ್ಟಿಗೊಳಿಸಿ ಅಂತಿಮವಾಗಿ ಬಿಜೆಪಿಯ ಜೊತೆ ಸಹಜ ಸೈದ್ಧಂತಿಕ ಮತ್ತು ರಾಜಕೀಯ ಮೈತ್ರಿ ಮಾಡಿಕೊಳ್ಳುವಂತೆ ಮಾಡಿದೆ.
ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ಬಿಜೆಪಿಯ ರಾಜಕೀಯ ಮಾತ್ರವಲ್ಲ. ಬಿಜೆಪಿಯ ಸಂಸ್ಕೃತಿಯೂ ಎದ್ದು ಕಾಣುತ್ತದೆ. ಪ್ರಜಾತಂತ್ರದಲ್ಲಿ ಜನರಿಗೆ ಸಂವಿಧಾನದಲ್ಲಿ ಕಲ್ಪಿಸಿರುವ ಅವಕಾಶಗಳನ್ನು ದೊರಕಿಸುವುದು ಜನಪ್ರತಿನಿಧಿಗಳ ಸಾಂವಿಧಾನಿಕ ಕರ್ತವ್ಯ ಎಂಬ ನಮ್ರ ಪ್ರಜಾತಂತ್ರಿಕ ಸಂಸ್ಕೃತಿಯ ಬದಲಿಗೆ ಜನರು ತಮಗೆ ಋಣಿಯಾಗಿ, ಕೃತಜ್ನರಾಗಿ ಇರಬೇಕೆಂಬ ಫ಼್ಯೂಡಲ್ ಧೋರಣೆಯೂ ಎದ್ದು ಕಾಣುತ್ತದೆ. ಇದೆಲ್ಲದರ ಜೊತೆಗೆ ಈ ಹೇಳಿಕೆಯ ಮೂಲಕ ಅವರು ಮತ್ತೊಂದು ದೊಡ್ಡ ಸುಳ್ಳಿಗೆ ಮರುಜೀವ ಕೊಟ್ಟಿದ್ದಾರೆ.
ಅದು ಇಂದು ಮುಸ್ಲಿಮರಿಗೆ ಸಾಮಾಜಿಕ ಹಿಂದುಳಿದಿರುವಿಕೆಯ ವರ್ಗೀಕರಣದಡಿ ನೀಡಲಾಗಿರುವ 2-ಬಿ ಮೀಸಲಾತಿಯನ್ನು ದೇವೇಗೌಡರು ಕೊಟ್ಟಿದ್ದು ಎಂಬ ಸುಳ್ಳು ಹಾಗೂ ಮಿಥ್ಯಾಕಥನ. ಇದನ್ನು ಯಾವುದೇ ಪುರಾವೆಯಿಲ್ಲದೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಹೇಳುತ್ತಾ ಹೋಗುತ್ತಿದ್ದಾರೆ. ಮಾಧ್ಯಮಗಳು ಅದರ ಸತ್ಯಾಸತ್ಯೆಯನ್ನು ಪರಿಶೀಲಿಸದೆ ಪ್ರಕಟಿಸುತ್ತಾ ಹೋಗುತ್ತಿವೆ. ಇದರ ಜೊತೆಗೆ ಕರ್ನಾಟಕದ ಮೂಲದ ಕೆಲವು ಬುದ್ಧಿಜೀವಿಗಳು ಕೂಡ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದರೆ ತಮ್ಮ ಇಂಗ್ಲಿಷ್ ವ್ಯಾಖ್ಯಾನ ಹಾಗೂ ಪುಸ್ತಕಗಳಲ್ಲಿ ಈ ಮಿಥ್ಯಕಥನವನ್ನೇ ಪ್ರಚುರ ಪಡಿಸುತ್ತಿರುವುದರಿಂದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು ಎಂಬ ಮಿಥ್ಯೆ ಹೊಸರೆಕ್ಕೆಪುಕ್ಕಗಳನ್ನು ಪಡೆದುಕೊಂಡು ಹರಡುತ್ತಲೇ ಇದೆ. ವಾಸ್ತವವಾಗಿ ಇಂದು ಮುಸ್ಲಿಮರಿಗೆ ಸಾಮಾಜಿಕವಾಗಿ ಹಿಂದುಳಿದ ವರ್ಗದ ಮೀಸಲಾತಿವರ್ಗೀಕರಣದಡಿ ಪ್ರವರ್ಗ 2-ಬಿ ಮೀಸಲಾತಿಯನ್ನು ನ್ಯಾ. ಚಿನ್ನಪ್ಪರೆಡ್ಡಿಯವರ ವರದಿಯನ್ನು ಆಧರಿಸಿ 1994 ರಲ್ಲಿ ಸರ್ಕಾರಿ ಆದೆಶದ ಮೂಲಕ ಕಲ್ಪಿಸಿದ್ದು ಆಗಿನ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ವಿನಾ 1995 ರಲ್ಲಿ ಅಧಿಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರವಲ್ಲ. ಆಸಕ್ತರು ಆ ಆದೇಶವನ್ನು ಈ ಕೆಳಗಿನ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು : https://kscbc.karnataka.gov.in/storage/pdf-files/GO%20No%20SWD%20150%20BCA%2094%20Dated%2017%2009%201994.pdf
ಹೆಚ್ಚೆಂದರೆ ದೇವೇಗೌಡರೂ ಹಿಂದಿನ ಕಾಂಗ್ರೆಸ್ ಸರ್ಕಾರದ ಮೀಸಲಾತಿ ಸೂತ್ರವನ್ನೇ ತಿದ್ದುಪಡಿ ಮಾಡದೆ ಮುಂದುವರೆಸಿದರು ಎಂದು ಹೇಳಬಹುದು. ಹಾಗೆಯೇ ವೀರಪ್ಪ ಮೊಯ್ಲಿ ಸರ್ಕಾರ ಚುನಾವಣ ಉದ್ದೆಶದಿಂದಲೇ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದರು ಎಂದು ಆರೋಪಿಸಬಹುದು. ಅದೇನೇ ಇದ್ದರೂ 2-ಬಿ ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು ಎಂಬುದು ನಿಜವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಂದು ದೇವೇಗೌಡರ ಪೂರ್ಣ ಆಶೀರ್ವಾದದೊಂದಿಗೆ ಜೆಡಿಎಸ್ ಪಕ್ಷ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಘೋಷಿಸಿರುವ ಬಿಜೆಪಿಯ ಜೊತೆ ಮಾಡಿಕೊಂಡಿರುವ ವ್ಯೂಹಾತ್ಮಕ ಮೈತ್ರಿ ಅವರ ಸಾಮಾಜಿಕ ನ್ಯಾಯದ ಕಾಳಜಿ ಎಷ್ಟು ಸೋಗಲಾಡಿತನದ್ದು ಎಂಬುದನ್ನು ಸಾಬೀತು ಮಾಡುತ್ತದೆ.
ಆದ್ದರಿಂದ ಈ ಕುಮಾರಸ್ವಾಮಿಯವರ ತಪ್ಪು ಹೇಳಿಕೆಯ ಸಂದರ್ಭದಲ್ಲಿ.. ಕರ್ನಾಟಕದಲ್ಲಿ ದೇವೇಗೌಡರು ರಾಜಕೀಯಕ್ಕೆ ಕಾಲಿಡುವ ಮುಂಚಿನಿಂದಲೂ ಈ ನಾಡಿನಲ್ಲಿ ಸಾಮಾಜಿಕ ನ್ಯಾಯದ ಭಾಗವಾಗಿ ಒದಗಿಸುತ್ತಿದ್ದ ಮುಸ್ಲಿಮ್ ಮೀಸಲಾತಿಯ ಇತಿಹಾಸವನ್ನು, ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ಹಿನ್ನೆಲೆ ಮತ್ತು ಅದರ ಸಾಂವಿಧಾನಿಕ ನೆಲೆಯನ್ನೂ, ಹಾಗೂ ಅಂತಿಮವಾಗಿ ಇಂದು ಮುಸ್ಲಿಮರಿಗೆ ಸಾಂವಿಧಾನಿಕವಾಗಿ ನೀಡಲಾಗುತ್ತಿರುವ 2-ಬಿ ಮೀಸಲಾತಿಯ ನಿರ್ಣಯಗಳನ್ನು ಗಮನಿಸೋಣ.
ಈ ಮೂಲಕವಾದರೂ ಮುಸ್ಲಿಮರ ಮೀಸಲಾತಿಗೆ ದೇವೇಗೌಡರೇ ಕಾರಣವೆಂಬ ಮಿಥ್ಯಾಕಥನವು ನಿಲ್ಲಲಿ.
*ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ*
ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ Other Backward Classes-ಇತರ ಹಿಂದುಳಿದ ವರ್ಗಗಳ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲೂ ಈಗಲೂ 20 ರಾಜ್ಯಗಳ ವಿವಿಧ ಮುಸ್ಲಿಂ ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. 2013 ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡ ಸರ್ಕಾರವು ಮುಸ್ಲಿಮರ ಒಂಭತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲ್ಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ಹಿಂದುಳಿದ ವರ್ಗಗಳೆಂದೇ ಪರಿಗಣಿಸಬೇಕೆಂದು ಆದೇಶಿಸಿತ್ತು. ಏಕೆಂದರೆ ಸಂವಿಧಾನದ ಆರ್ಟಿಕಲ್ 15 (4)ಮತ್ತು 16 (4)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ವೈಜ್ನಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರ್ಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿ, ಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರಿಗೆ ಮೀಸಲಾತಿ ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರ್ಕಾರ ಈ ಕಾರಣಗಳಿಗಾಗಿ ಮುಸ್ಲೀಮರಿಗೆ ಮೀಸಲಾತಿ ಕಲ್ಪಿಸಲೇ ಬೇಕು. ಅದಕ್ಕೆ ಧರ್ಮ ದ ಅಡ್ಡಗೋಡೆಯಿಲ್ಲ.
*ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯ ಇತಿಹಾಸ*
ಹಾಗೆ ನೋಡಿದರೆ ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೮ರ ಮಿಲ್ಲರ್ ಸಮಿತಿಯಿಂದ ಮೊದಲುಗೊಂಡು, ೧೯೬೦ರ ನಾಗನಗೌಡ ಸಮಿತಿ, ೧೯೭೭ರ ದೇವರಾಜ್ ಅರಸ್ ಸರ್ಕಾರದ ಮೀಸಲಾತಿ ಸೂತ್ರ, ೧೯೮೬ರ ವೆಂಕಟಸ್ವಾಮಿ ಅಯೋಗದ ವರದಿ ಮತ್ತು ೧೯೯೦ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಅಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ನಾನಿಕ ಅಧ್ಯಯನ ಹಾಗೂ ದತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ. ೧೯೭೪ರಲ್ಲಿ ಹಾವನೂರ್ ನೇತೃತ್ವದ ಮೊದಲ ಹಿಂದುಳಿದ ವರ್ಗಗಳ ಅಯೋಗ ಲಿಂಗಾಯತರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿದಿದ್ದರೂ ಹಿಂದೂ ಜಾತಿ ಶ್ರೇಣಿಕರಣದ ಭಾಗವಲ್ಲ ಎಂಬ ಕಾರಣಕ್ಕೆ ಮೀಸಲಾತಿಯನ್ನು ಒದಗಿಸಿರಲಿಲ್ಲ. ಹಾಗಿದ್ದರೂ ದೇವರಾಜ್ ಅರಸ್ ಸರ್ಕಾರ ಆ ಸಮುದಾಯಗಳಿಗೆ ಮೀಸಲಾತಿ ಒದಗಿಸಿತು.
ಸರ್ಕಾರದ ಈ ನಿರ್ಧಾರವನ್ನು ಕೂಡಲೇ ಕರ್ನಾಟಕದ ಹೈಕೋರ್ಟಿನಲ್ಲಿ ಕೆಲವರು ಪ್ರಶ್ನಿಸಿದರು. ೧೯೭೭ರ ಕರ್ನಾಟಕದ ಹೈಕೋರ್ಟ್ ತೀರ್ಪು: ಇದನ್ನು ಕರ್ನಾಟಕದ ಹೈಕೋರ್ಟಿನ ವಿಭಾಗೀಯ ಪೀಠ ೧೯೭೯ರ ಏಪ್ರಿಲ್ ೯ ರಂದು WP ೪೩೭೧/೭೭ ಪ್ರಕರಣದಲ್ಲಿ ಇತ್ಯರ್ಥ ಮಾಡುತ್ತಾ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ: “.. So far as the Muslims are concerned, the commission was unwise in excluding them from the list of Backward Classes solely on the ground that they belong to a religious minority. The Commission has however found that the Muslims are socially and educationally backward and also do not have adequate representation in the service . The fact that they are religious minority is no ground to exclude them from the list of backward classes . The government in our opinion was perfectly justified in listing the Muslims in the list of Backward classes”
(ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಅಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮವಲ್ಲ. ಅದೇನೇ ಇದ್ದರೊ ಆಅಯೋಗವು ಮುಸ್ಲಿನರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದಾರೆ ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ.
ಆದ್ದರಿಂದ ಸರ್ಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ.) ಇದನ್ನು ಅಪೀಲುದಾರರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಕೂಡ ೧೯೮೫ ರಲ್ಲಿ ಮುಸ್ಲಿಮರು ಒಂದು ಸಮುದಾಯವಾಗಿಯೇ ಹಿಂದುಳಿದಿದ್ದಾರೆ ಎಂದು ಕಂಡುಬಂದಲ್ಲಿ ಇಡೀ ಸಮುದಾಯವೇ ಮೀಸಲಾತಿಗೆ ಅರ್ಹ ಎಂದು ಘೋಷಿಸಿತು. ಆದರೆ ಕರ್ನಾಟಕ ಸರ್ಕಾರ ಈ ಮಧ್ಯೆ ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ಎರಡನೇ ಹಿಂದುಳಿದ ಅಯೋಗವನ್ನು ರಚಿಸುವ ತೀರ್ಮಾನ ತಿಳಿಸಿತು. ವೆಂಕಟಸ್ವಾಮಿ ಕಮಿಷನ್ ಸಹ ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಮತ್ತು ಮೀಸಲಾತಿಗೆ ಅರ್ಹ ಎಂದು ಘೋಷಿಸಿತು.
ಹಾಗೆಯೇ ೧೯೯೨ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಾಹನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಧಿಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ: ““This inadequate representation is not confined to any specific section of the people, but all those who fall under the group of social backwardness whether they are Shudras of Hindu community or similarly situated other backward classes of people in other communities, namely, Muslims, Sikhs, Christians etc.” (https://indiankanoon.org/doc/1363234/)
(ಸರ್ಕಾರೀ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವ್ಯವಾಗುತ್ತದೆ. ಅವರು ಹಿಂದುಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೆ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಮ್, ಸಿಖ್ ಅಥವಾ ಕ್ರಿಸ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ)
ಹೀಗಾಗಿ ಸಾಮಾಜಿಕವಾಗಿ ಮತ್ತು ಶಿಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂಬುದು ನ್ಯಾಯಾಲಯದ ಅತ್ಯುನ್ನತ ಹಂತಗಳಲ್ಲಿ ಇತ್ಯರ್ಥವಾಗಿದೆ. ಅದು ದೇವೇಗೌಡರ ಕೊಡುಗೆ ಎಂದು ಪ್ರಚಾರ ಮಾಡುವುದು ನ್ಯಾಯಾಲಯದ ಅಪಮಾನವಾಗುತ್ತದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ೧೯೮೮ ರಲ್ಲಿ ಆಗಿನ ಜನತಾ ಪಕ್ಷದ ಕರ್ನಾಟಕ ಸರ್ಕಾರ ನ್ಯಾ. ಚಿನ್ನಪ್ಪರೆಡ್ಡಿ ಅವರ ನೇತೃತ್ವದಲ್ಲಿ ಮೂರನೇ ಹಿಂದುಳಿದ ವರ್ಗಗಳ ಅಯೋಗವನ್ನು ನೇಮಿಸಿತು. ಇಂದು ಮುಸ್ಲಿಮರಿಗೆ ನೀಡಲಾಗುತ್ತಿರುವ ೨-ಬಿ ವರ್ಗೀಕರಣದ ಮೀಸಲಾತಿ ಈ ವೈಜ್ನಾನಿಕ ವರದಿಯನ್ನು ಆಧರಿಸಿದ್ದು.
ಇದನ್ನು ಯಾರು ಜಾರಿಗೆ ತಂದಿದ್ದು ಎಂಬುದನ್ನು ತಿಳಿಯುವ ಮುನ್ನ ಮುಸ್ಲಿಮ ಸಮುದಾಯವು ಏಕೆ ಮತ್ತು ಹೇಗೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಅರ್ಹವಾಗುತ್ತದೆ ಎಂಬ ಬಗ್ಗೆ ನ್ಯಾ. ಚಿನ್ನಪ್ಪರೆಡ್ಡಿಯವರ ವೈಜ್ನಾನಿಕ ವರದಿಯ ಸಾರಾಂಶವನ್ನೊಮ್ಮೆ ಗಮನಿಸೋಣ.
*ನ್ಯಾ. ಚಿನ್ನಪ್ಪರೆಡ್ಡಿ ವರದಿ*
ಕರ್ನಾಟಕ ಸರ್ಕಾರವು ಮೂರನೇ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷರನ್ನಾಗಿ ನ್ಯಾ. ಚಿನ್ನಪ್ಪರೆಡ್ಡಿಯವರನ್ನು ನೇಮಿಸಿ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಗೆ ಅರ್ಹವಾಗಿರುವ ವರ್ಗಗಳನು ಗುರುತಿಸಿ ಅವರಿಗೆ ಯಾವ ಬಗೆಯ ಮೀಸಲಾತಿಯನ್ನು ಕಲ್ಪಿಸಬೇಕೆಂದು ಶಿಫ಼ಾರಸ್ಸು ಮಾಡಲು ಕೋರಿಕೊಂಡಿತ್ತು. ನ್ಯಾ. ಚಿನ್ನಪ್ಪರೆಡ್ಡಿಯವರು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದು ವಸಂತ್ ಕುಮಾರ್ ವರ್ಸಸ್ ಕರ್ನಾಟಕ ಸರ್ಕಾರ ಪ್ರಕರಣದಲಿ ದೇವರಾಜು ಅರಸು ಸರ್ಕಾರದ ಮೀಸಲಾತಿ ಸೂತ್ರವನ್ನು ಪರಿಶೀಲಿಸಿದ ಸಾಂವಿಧಾನಿಕ ಪೀಠದಲ್ಲಿ ಒಬ್ಬರಾಗಿದ್ದರು. ಹಾಗೆಯೇ ದೇಶದಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಹಚ್ಚುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಒದಗಿಸಿದವರಲ್ಲಿ ಒಬ್ಬರಾಗಿದ್ದರು. ೧೯೮೮ರಲ್ಲಿ ತನ್ನ ಅಧ್ಯಯನವನ್ನು ಪ್ರಾರಂಭಿಸಿದ ನ್ಯಾ. ಚಿನ್ನಪ್ಪರೆಡ್ಡಿ ಅಯೋಗವು ಎರಡು ವರ್ಷಗಳ ಕಾಲ ವಿಸ್ತೃತವಾದ ಅಂಕಿಅಂಶಗಳನ್ನು ಸಂಗ್ರಹಿಸಿತು. ೫೪೩ ಹಳ್ಳಿಗಳಲ್ಲಿ ಪ್ರತ್ಯಕ್ಷ ಸರ್ವೇ ಅಧ್ಯಯನ ನಡೆಸಿತು. ಹಾಗೂ ಜಾತಿವಾರು ಜನಸಂಖ್ಯೆ, SSLC ಪರೀಕ್ಷೆಯನ್ನು ತೆಗೆದುಕೊಂಡವರ ಮತ್ತು ಪಾಸಾದವರ ಜಾತಿವಾರು, ಸಮುದಾಯವಾರು ಮಾಹಿತಿ, ಉನ್ನತ ಶಿಕ್ಷಣಕ್ಕೆ ಹೋದವರ ಜಾತಿ-ಸಮುದಾಯವಾರು ಮಾಹಿತಿ, ಆದಾಯ ಮಾಹಿತಿ, ಸರ್ಕಾರಿ ಸೇವೆಗಳಲ್ಲಿ ಜಾತಿವಾರು-ಸಮುದಾಯವಾರು ಪ್ರಾತಿನಿಧ್ಯ್ ಇತ್ಯಾದಿಗಳ ಬಗ್ಗೆ ಕೂಲಂಕಷ ಮಾಹಿತಿಯನ್ನು ಒಟ್ಟು ಮಾಡಿತು.
ಭಾರತೀಯ ಸಮಾಜದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಡತನಕೆ ದೂಡಲ್ಪಟ್ಟಿರುವುದು ಹಾಗೂ ಅಧಿಕಾರ-ಸಂಪತ್ತುಗಳ ನಿರಾಕರಣೆಯು ಸಾಮಾಜಿಕ ಮತ್ತು ಶಿಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣ ಎಂದು ಚಿನ್ನಪ್ಪರೆಡ್ಡಿ ಅಯೋಗವು ಪರಿಗಣಿಸಿತು. ಮತ್ತು ಈ ಹಿಂದುಳಿದಿರುವಿಕೆಯು ಜ್ನಾನ ಮತ್ತು ಸಂಪತ್ತಿನ ಸಾಪೇಕ್ಷ ಕೊರತೆಯಲ್ಲಿ ವ್ಯಕ್ತವಾಗುತ್ತದೆ. ಇವೆಲ್ಲಕ್ಕೊ ಬಡತನ ಕಾರಣವಾಗಿದ್ದರೆ ಜಾತಿಯು ಅದರ ಮುಖವಾಗಿರುತ್ತದೆ. ಜಾತಿ ಶ್ರೀಣೀಕರಣದಲ್ಲಿ ಕೆಳಗಿದ್ದಷ್ಟು ಜ್ನಾನ ಮತ್ತು ಸಮ್ಪತ್ತಿನಿಂದ ದೂರವಾಗುತ್ತಾ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯುತ್ತಾ ಹೋಗುವುದು ಭಾರತ ಸಮಾಜದ ನಿರ್ದಿಷ್ಟ ಲಕ್ಷಣ ಎಂದು ಅಯೋಗವು ಪರಿಗಣಿಸಿತು. ಈ ಹಿಂದುಳಿದಿರುವಿಕೆಯನ್ನು ಅಳೆಯಲು ಪ್ರಧಾನವಾಗಿ ಮೂರು ಮಾನದಂಡಗಳನ್ನು ರೂಪಿಸಿತು ಮತ್ತು ಅದರ ಸುತ್ತ ಕ್ಶೇತ್ರ ಅಧ್ಯಯನ ಹಾಗೂ ಅಂಕಿಅಂಶಗಳನ್ನು ಸಂಗ್ರಹಿಸಿತು. ೧) SSLC ಪರೀಕ್ಷೆಯನ್ನು ತೆಗೆದುಕೊಂಡವರ ರಾಜ್ಯದ ಜನಸಂಖ್ಯೆಯ ಸರಾಸರಿಗೆ ಮತ್ತು ಪಾಸಾದವರ ಸರಾಸ್ರರಿಗೆ ಅಯಾ ಜಾತಿ ಮತ್ತು ಸಮುದಾಯಗಳ ಸರಾಸರಿಯನ್ನು ಹೋಲಿಸುವುದು ೨) ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರ ಜಾತಿವಾರು ಸರಾಸರಿ ೩) ಸರ್ಕಾರದ ಎ,ಬಿ.ಸಿ.ಡಿ ಶ್ರೇಣಿಗಳ ಉದ್ಯೋಗಗಳಲ್ಲಿ, ಸರ್ಕಾರಿ ಕಾರ್ಖಾನೆ , ವಿಶ್ವವಿದ್ಯಾಲಯ ಗಳ ನೌಕರರ ಜಾತಿವಾರು ಪ್ರಮಾಣದ ಅಂಕಿಅಂಶ ..ಇತ್ಯಾದಿಗಳು. ಇವೆಲ್ಲದರ ಬಗ್ಗೆ ಅಧ್ಯಯನ ಮಾಡುವಾಗಲೂ ಹಿಂದೂ ಸಮುದಾಯದ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದರ ಜೊತೆಗೆ ಹಿಂದುಯೇತರ ಸಮುದಾಯಗಳಾದ ಮುಸ್ಲಿಂ, ಕ್ರಿಸ್ಚಿಯನ್, ಬೌದ್ಧ ಮತ್ತು ಸಿಖ್ ಸಮುದಾಯಗಳ ಅಂಕಿಅಂಶಗಳನ್ನು ಅಯೋಗವು ಸಂಗ್ರಹಿಸಿತು. ಇವೆಲ್ಲಕ್ಕೂ ೧೯೮೮ರ ಅಂಕಿಅಂಶಗಳನ್ನು ಬಳಸಿಕೊಂಡಿತು.
ಈ ಅಂಕಿಅಂಶಗಳು :
“JUSTICE: Journey Of The Karnataka Backward Classes” ಎಂಬ ಶೀರ್ಷಿಕೆಯ “Report of the Karnataka Third Backward Classes Commission- Vol-1” ರಲ್ಲಿ ವಿಷದವಾಗಿ ದಾಖಲಾಗಿದೆ. ಚಿನ್ನಪ್ಪರೆಡ್ಡಿ ಅಯೋಗವು ಮೇಲಿನ ಮೂರೂ ಪ್ರಶ್ನೆಗಳ ಸುತ್ತಾ ಕರ್ನಾಟಕದ ೧೦೨ ಜಾತಿ ಮತ್ತು ಸಮುದಾಯಗಳಿಗೆ ಸಂಬಂಧಪಟ್ಟ ಅಂಕಿಅಂಶವನ್ನೂ ಪ್ರತ್ಯೇಕವಾಗಿ ಸಂಗ್ರಹಿಸಿ ನಂತರ ಅವುಗಳನ್ನು ಸಾಪೇಕ್ಷ ತುಲನೆ ಮಾಡಿ ಹಿಂದುಳಿದಿರುವಿಕೆಯ ದೂರವನ್ನು ನಿಶ್ಚಿತಗೊಳಿಸಿ ತಲಾವಾರು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿತು.
ಆದರೆ ಈ ಲೇಖನದಲ್ಲಿ ಅವೆಲ್ಲದರ ವಿವರಗಳನ್ನು ಚರ್ಚಿಸಿಲ್ಲ. ಬದಲಿಗೆ ಈ ಎಲ್ಲಾ ಮಾನದಂಡಗಳಲ್ಲಿ ಸಮಾಜದಲ್ಲಿ ಅತ್ಯಂತ ಮುಂದುವರೆದ ಸಮುದಾಯವಾಗಿರುವ ಬ್ರಾಹ್ಮಣ ಜಾತಿಯ ಅಂಕಿಅಂಶಗಳನ್ನು, ಹಾಗೂ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಪರಿಶಿಷ್ಟ ಜಾತಿಗಳ ಅಂಕಿಅಂಶಗಳನ್ನು ಒದಗಿಸಲಾಗಿದೆ. ಮತ್ತು ಅದರ ಹೋಲಿಕೆಯಲ್ಲಿ ಮುಸ್ಲಿಂ ಸಮುದಾಯದ ಸಂಬಂಧಪಟ್ಟ ಅಂಕಿಅಂಶಗಳನ್ನು ನೀಡಲಾಗಿದೆ. ಮುಸ್ಲಿಮರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸರಿಯಾಗಿ ಗ್ರಹಿಸುವಲ್ಲಿ ಇದು ಒಂದು ಉತ್ತಮ ಸಾಧನವಾಗಬಹುದು ಎಂದು ನಾನು ಭಾವಿಸುತ್ತೇನೆ.
*ಶೈಕ್ಷಣಿಕ ಹಿಂದುಳಿದಿರುವಿಕೆ*
ಕರ್ನಾಟಕದ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರವಲ್ಲದೆ ಒಟ್ಟಾರೆ ಸಮಜಿಕ ಹಿಂದುಳಿದಿರುವಿಕೆಯ ಪ್ರಮಾಣವನ್ನು ಅಂದಾಜು ಮಾಡಲು ಚಿನ್ನಪ್ಪರೆಡ್ಡಿ ಅಯೋಗವು ರಾಜ್ಯದ ಜನಸಖ್ಯೆಯಲ್ಲಿ ೧೯೮೮ ರಲ್ಲಿ ಒಟ್ಟಾರೆಯಾಗಿ SSLCಷ ಪರೀಕ್ಷೆಯನ್ನು ಎದುರಿಸಿದವರಷ ಪ್ರಮಾಣವನ್ನು ಮತ್ತು ಪ್ರತಿ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ SSLC ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಹೋಳಿಸುತ್ತದೆ. ಹಾಗೆಯೇ ಪಾಸಾದವರ ಪ್ರಮಾಣವನ್ನು ಹೋಲಿಸಿದರೂ ತೇರ್ಗಡೆಯಾಗಲು ಜಾತಿಯೊಳಗಿನ ವ್ಯಕ್ತಿಗಳ ಸಾಮರ್ಥ್ಯವೂ ಒಂದು ಪಾತ್ರ ವಹಿಸುವುದರಿಂದ SSಐಅ ಪರೀಕ್ಷೆಯನ್ನು ತೆಗೆದುಕೊಂಡವರ ಪ್ರಮಾಣವು ಅತ್ಯಂತ ಕೀಲಕವಾದದ್ದು ಎಂದು ಪರಿಗಣಿಸುತ್ತದೆ. ಆ ನಂತರದ ಉನ್ನತ ಶಿಕ್ಷಣ , ಅದರಿಂದ ಸಿಗುವ ಉದ್ಯೋಗವಾಕಾಶ ಎಲ್ಲಕ್ಕೂ SSLC ಪರೀಕ್ಷೆ ಪ್ರಮುಖ ಹಂತವಾಗಿರುವುದರಿಂದ ಅದನು ಅತ್ಯಂತ ಪ್ರಮುಖ ಮಾನದಂಡವಾಗಿ ಚಿನ್ನಪ್ಪರೆಡ್ಡಿ ಅಯೋಗ ಪರಿಗಣಿಸುತ್ತದೆ.
೧೯೮೮ರಲ್ಲಿ ಕರ್ನಾಟಕದ ಜನಸಂಖ್ಯೆ ೪.೪ ಕೋಟಿ ಎಂದು ಅಯೋಗ ವೈಜ್ನಾನಿಕವಾಗಿ ಅಂದಾಜಿಸುತ್ತದೆ. ಅಲ್ಲದೆ ವೆಂಕಟಸ್ವಾಮಿ ಅಯೋಗವು ೧೯೮೪-೮೬ರಲ್ಲಿ ೬೦ ಲಕ್ಷ ಮನೆಗಳಿಗೆ ಭೇಟಿ ನೀಡಿ ೧೯೩೧ರ ಕೊನೆಯ ಜಾತಿ ಸೆನ್ಸಸ್ ಅನ್ನು ಗಮನದಲ್ಲಿಟ್ಟುಕೊಂಡು ಮುಂದಿರಿಸಿದ ಜಾತಿವಾರು ಜನಸಂಖ್ಯೆಯ ಅಂದಾಜನ್ನು ಸರ್ಕಾರವು ಒಪ್ಪಿಕೊಂಡಿತ್ತು. ಚಿನ್ನಪ್ಪರೆಡ್ಡಿ ಅಯೋಗವು ಆ ಅಂದಾಜನ್ನು ಒಪ್ಪಿಕೊಳ್ಳುತ್ತದೆ. ಅದರಂತೆ ೧೯೮೮ರ ವೇಳೆಗೆ ಬ್ರಾಹ್ಮಣರು ಕರ್ನಾಟಕದ ಜನಸಂಖ್ಯೆಯ ಶೇ. ೩.೪ ರಷ್ಟು (೧೫.೨೩ ಲಕ್ಷ), ಪರಿಶಿಷ್ಟ ಜಾತಿ – ಶೇ. ೧೬.೭ (೭೩.೭ ಲಕ್ಷ) ಮತ್ತು ಮುಸ್ಲಿಮರು ಕರ್ನಾಟಕದ ಜನಸಂಖ್ಯೆಯ ಶೇ. ೧೧.೬೭ ರಷ್ಟು (೫೧.೪೭ ಲಕ್ಷ) ಇದ್ದರೆಂದು ಅಯೋಗವು ಅಂದಾಜಿಸುತ್ತದೆ. ೧೯೮೮ರಲ್ಲಿ ಕರ್ನಾಟಕದಲ್ಲಿ ಒಟ್ಟು ೩.೪ ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆಯನ್ನು ಎದುರಿಸಿದರು. ಅರ್ಥಾತ್ SSLC ವರೆಗೆ ತಲುಪಿದರು. ಇದು ಕರ್ನಾಟಕದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.೦.೭೭ ರಷ್ಟು. ಇದರಲ್ಲಿ ೧,೩೪,೧೬೦ ವಿದ್ಯಾರ್ಥಿಗಳು ತೇರ್ಗಡೆಯಾದರು. ಎಂದರೆ ಶೇ. ೦.೩೯ ರಷ್ಟು. ಇವು ರಾಜ್ಯದ ಒಟ್ಟಾರೆ ಸರಾಸರಿ. ಯಾವ ಜಾತಿಗಳ ಸರಾಸರಿ SSLC ಪರೀಕ್ಷೆಯನ್ನು ಎದುರಿಸಿದ ರಾಜ್ಯದ ಸರಾಸರಿಯನ್ನು ಮೀರಿರುತ್ತದೋ ಆ ಜಾತಿಗಳು ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಮಾಣ ಇರುವ ಜಾತಿಗಳಿಗಿಂತ ಸಾಪೇಕ್ಷವಾಗಿ ಶೈಕ್ಷಣಿಕವಾಗಿ ಮುಂದುವರೆದ ಜಾತಿಗಳೆಂದು ಅಯೋಗವು ಪರಿಗಣಿಸಿತು.
ಅದರಂತೆ SSLC ಪರೀಕ್ಷೆಯನ್ನು ಎದುರಿಸ್ದವರಲ್ಲಿ ರಾಜ್ಯದ ಸರಾಸರಿ ಶೇ.೦.೭೭ ಇದ್ದರೆ ಬ್ರಾಹ್ಮಣರ ಜಾತಿಯ ಸರಾಸರಿ ಶೇ. ೧.೪೧ ಅಂದರೆ ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಪರಿಶಿಷ್ಟ ಜಾತಿಗಳ ಸರಾಸರಿ ೦.೫೯. ಅಂದರೆ ರಾಜ್ಯದ ಸರಾಸರಿಗಿಂತ ಶೇ. ೩೦ರಷ್ಟು ಕಡಿಮೆ.
ಮುಸ್ಲಿಮರ ಸರಾಸರಿ ಶೇ. ೦.೪೮ ಮಾತ್ರ. ಅಂದರೆ ಶೈಕ್ಷಣಿಕವಾಗಿ ಮುಸ್ಲಿಮರ ಪರಿಸ್ಥಿತಿ ಪರಿಶಿಷ್ಟ ಜಾತಿಗಳಿಗಿಂತ ಹೀನಾಯ. ಮತ್ತು ಬ್ರಾಹ್ಮಣರ ಸರಾಸರಿಗಿಂತ ನಾಕುಪಟ್ಟು ಕಡಿಮೆ. ಅಂದರೆ ಮುಸ್ಲಿಮರಿಗಿಂತ ಬ್ರಾಹ್ಮಣರು ನಾಕುಪಟ್ಟು ಶೈಕ್ಷಣಿಕವಾಗಿ ಮುಂದುವರೆದ ಜಾತಿಯಾಗಿದೆ. ಈಗ ಅವರೊಡನೆ ಸರಿಸಮಾವಾಗಿ ಪೈಪೋಟಿ ಮಾಡಲು ಮುಸಿಮರನ್ನು ದೂಡಲಾಗಿದೆ. ಹಾಗೆಯೇ ರಾಜ್ಯದ ಜನಸಂಖ್ಯೆಗೆ ಹೋಲಿಸಿದಲ್ಲಿ ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. ೩.೪ ಮಾತ್ರ ಇದ್ದರೂ, SSLC ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಪ್ರಮಾಣ ಶೇ. ೬.೩೭. ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇ. ೧೬.೭ ರಷ್ಟಿದ್ದರೂ SSLC ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಪರಿಶಿಷ್ಟ ಜಾತಿಗಳ ಪ್ರಮಾಣ ಕೇವಲ ಶೇ. ೭.೪೧ ರಷ್ಟು.
ಆದರೆ ಮುಸ್ಲಿಮರು ಜನಸಂಖ್ಯೆಯ ಶೇ. ೧೧.೬ರಷ್ಟಿದ್ದರೂ SSLC ಪರೀಕ್ಷೆಯನ್ನು ತೆಗೆದುಕೊಡವರಲ್ಲಿ ಕೇವಲ ಶೇ. ೭.೪೧ ಮಾತ್ರ ಮುಸ್ಲಿಮರು.
ಹಾಗೆಯೇ ಮೆಡಿಕಲ್, ಇಂಜನಿಯಂರಿಂಗ್, ಹಾಗೂ ಸ್ನಾತಕೋತ್ತರ ಪದವಿಗಳನ್ನು ಅಧ್ಯಯನ ಮಾಡುತ್ತಿರುವ ವರ ಜಾತಿವಾರು ತಲಾವಾರು ಪ್ರಮಾಣವನ್ನು ಅಯೋಗವು ಪರಿಶೀಲಿಸಿತು. ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. ೩.೪ ಇದ್ದರೂ ಈ ಒಟ್ಟಾರೆ ಉನ್ನತ ಶಿಕ್ಷಣದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ. ೨೧.೪೬, ಲಿಂಗಾಯತರ ಜಾತಿವಾರು ಪ್ರಮಾಣ ಶೇ. ೧೫.೩ ಇದ್ದರೆ ಉನ್ನತ ಶಿಕ್ಷಣದಲ್ಲಿ ಶೇ. ೧೫.೬೮ರಷ್ಟು ವಿದ್ಯಾರ್ಥಿಗಳು ಆ ಸಮುದಾಯಕ್ಕೆ ಸೇರಿದವರು. ಒಕ್ಕಲಿಗರು ರಾಜ್ಯದ ಜನಸಂಖ್ಯೆಯ ಶೇ. ೧೦.೮ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಅವರ ಪಾಲು ಶೇ. ೧೧.೬೩. ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ. ೧೬.೭ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟರ ಪ್ರಮಾಣ ೧೪.೪೪.ಅಂದರೆ ಅವರ ಜನಸಂಖೆಯ ಪ್ರಮಾಣಕ್ಕಿಂತ ಕಡಿಮೆ. ಆದರೆ ಇದರಲ್ಲೂ ಮುಸ್ಲಿಮರ ಪರಿಸ್ಥಿತಿ ತುಂಬಾ ದಾರುಣ. ಮುಸ್ಲಿಮರ ಜನಸಂಖ್ಯೆ ಶೇ. ೧೧.೬ ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಪಾಲು ಕೇವಲ ೫.೭೧. ಇದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ದೊರಕುತ್ತಿದ್ದಾಗ ಇದ್ದ ಪರಿಸ್ಥಿತಿ. ಇನ್ನು ಪ್ರತ್ಯೇಕ ಮೀಸಲಾತಿ ಕಿತ್ತುಹಾಕಿ ಬ್ರಾಹ್ಮಣರೊಂದಿಗೆ ಸ್ಪರ್ಧಿಸುವಂತೆ ಮಾಡಿದರೆ! ?
*ಆರ್ಥಿಕ-ಸಾಮಾಜಿಕ ಹಿಂದುಳಿದಿರುವಿಕೆ*
ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಂದಾಜಿಸಿದ ನಂತರ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಅಂದಾಜಿಸುವ ಚಿನ್ನಪ್ಪರೆಡ್ಡಿ ಅಯೋಗ ಬೆಂಗಳೂರಿನ ISEC ಸಂಸ್ಥೆಯ ಪ್ರೊ. ಜಿ. ತಿಮ್ಮಯ್ಯ ಅವರ ವರದಿಯನ್ನು ಪ್ರಮಾಣವಾಗಿ ಬಳಸುತ್ತದೆ. ಅದರ ಪ್ರಕಾರ ೧೯೭೪-೭೫ರ ಸುಮಾರಿಗೆ ಶೇ. ೫೬.೫ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದರು. ಒಟ್ಟಾರೆ ೧೦೨ ಜಾತಿ-ಸಮುದಾಯಗಳಲ್ಲಿ ಮುಸ್ಲಿಮರಿಗಿಂತ ಹೆಚ್ಚಿನ ಬಡತನವನ್ನು ಅನುಭವಿಸುತ್ತಿದ್ದದ್ದು ಪರಿಶಿಷ್ಟ ಜಾತಿಗಳು (೫೮.೪%) ಮತ್ತು ಪರಿಶಿಷ್ಟ ಬುಡಕಟ್ಟುಗಳು (೬೬.೩%) ಮಾತ್ರ. ಅಂದರೆ ಮುಸ್ಲಿಮರ ಆರ್ಥಿಕ- ಸಾಮಾಜಿಕ ಪರಿಸ್ಥಿತಿ ದಲಿತರಿಗೆ ಅತ್ಯಂತ ಸಮೀಪವಾಗಿತ್ತು. ಸಮೀಪವಾಗಿದೆ! ಇದಲ್ಲದೆ ಸರ್ಕಾರದ ಸೇವೆಗಳಲ್ಲಿ ೧೯೮೮ರಲ್ಲಿದ್ದ ಸಮುದಾಯವಾರು ಪ್ರಾತಿನಿಧ್ಯವನ್ನು ಸಹ ಚಿನ್ನಪ್ಪರೆಡ್ಡಿ ಅಯೋಗ ಪರಿಶೀಲಿಸಿದೆ.
ಸರ್ಕಾರದ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ. ೩.೪ ರಷ್ಟಿರುವ ಬ್ರಾಹ್ಮಣರು ಶೇ. ೬೯.೩ ರಷ್ಟಿದ್ದರೆ, ಒಕ್ಕಲಿಗರು ಶೇ. ೧೨.೪, ಲಿಂಗಾಯತರು ಶೇ. ೯.೯, ಪರಿಶಿಷ್ಟ ಜಾತಿಗಳ ಪ್ರಮಣ ಶೇ. ೩.೮ ರಷ್ಟಿದ್ದರೆ ಮುಸ್ಲಿಮರ ಪ್ರಮಾಣ ಕೇವಲ ಶೇ. ೨.೯ ಮಾತ್ರ. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗ್ರೂಪ್ I, II, III ಹುದ್ದೆಗಳಲ್ಲಿ ಶೇ. ೧೭ ರಷ್ಟು ಬ್ರಾಹ್ಮಣರು, ಶೇ. ೨೫ ಲಿಂಗಾಯತರು, ಶೇ. ೧೭.೫ ರಷ್ಟು ಒಕ್ಕಲಿಗರು, ಶೇ. ೮.೩ ರಷ್ಟು ಪರಿಶಿಷ್ಟ ಜಾತಿಗಳು.
ಮುಸ್ಲಿಮರು ಶೇ. ೪.೨ ರಷ್ಟು ಮಾತ್ರ! ಈ ಎಲ್ಲಾ ಕಾರಣಗಳಿಂದ ನ್ಯಾ. ಚಿನ್ನಪ್ಪರೆಡ್ಡಿ ಅಯೋಗವು ಹೀಗೆ ಅಭಿಪ್ರಾಯ ಪಡುತ್ತದೆ: “The picture presented by the Muslim Community as a whole is that of a Socially and Educationally Backward Class” ಎಂದರೆ “ಒಟ್ಟಾರೆ ಈ ಅಧ್ಯಯನವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದ್ದಾರೆ ಎಂಬ ಚಿತ್ರಣವನ್ನು ನೀಡುತ್ತದೆ” ಎಂದು ಘೋಷಿಸುತ್ತದೆ. ಮತ್ತು ಒಟ್ಟಾರೆ ಹಿಂದುಳಿದ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ಚಿನ್ನಪ್ಪರೆಡ್ಡಿ ಅಯೋಗವು ವಿಂಗಡಿಸಿ ಮುಸ್ಲಿಮರನ್ನು II ನೇ ಪ್ರವರ್ಗದಲ್ಲಿ ಸೇರಿಸಿತು. ಆ ಪ್ರವರ್ಗದಲ್ಲಿ ಬೌದ್ಧರನು ಕೂಡ ಸೇರಿಸಿತು.
*ವೀರಪ್ಪ ಮೊಯ್ಲಿ ಸರ್ಕಾರದ ೨-ಬಿ ಮೀಸಲಾತಿ ಆದೇಶ*
ನ್ಯಾ. ಚಿನ್ನಪ್ಪರೆಡ್ಡಿಯವರ ಅಯೋಗವು ೧೯೯೦ರಲ್ಲೇ ತನ್ನ ವರದಿಯನ್ನು ನೀಡಿತ್ತು. ಆದರೆ ಆ ವೇಳೆಗಾಗಲೇ ದೇಶಾದ್ಯಂತ ಮಂಡಲ್ ಅಯೋಗದ ವಿರುದ್ಧ ಮೇಲ್ಜಾತಿಗಳ ಪ್ರತಿರೋಧದಿಂದ ದೇಶ ಕುದಿಯುತ್ತಿತ್ತು. ಬಿಜೆಪಿ ಈ ಮಂಡಲ್ ಅಯೋಗದ ವರದಿಯ ವಿರುದ್ಧ ಕಮಂಡಲದ ರಾಮರಥ ಯಾತ್ರೆ ಶುರು ಮಾಡಿತ್ತು. ಹಾಗೂ ೧೯೯೧ ರಲ್ಲಿ ಮಧ್ಯಂತರ ಚುನಾವಣೆಯು ಲೋಕಸಭಗೆ ನಡೆಯಿತು. ಈ ರಾಜಕೀಯ ಕೋಲಾಹಲದ ಹಿನೆಲೆಯಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಚಿನ್ನಪ್ಪರೆಡ್ಡಿ ವರದಿಯನ್ನು ನೆನೆಗುದಿಯಲ್ಲಿ ಇಟ್ಟುಬಿಟ್ಟಿರು. ಇದರ ಜೊತೆಗೆ ೧೯೮೯ರಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷವನ್ನು ಅಭೂತಪೂರ್ವ ಅಂತರದೊಂದಿಗೆ ಸೋಲಿಸಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಒಳ ಜಗಳ ಮತ್ತು ಬಣ ರಾಜಕಾರಣದಿಂದ ಮೊಂದೊಡಗನ್ನು ಕಳೆದುಕೊಂಡಿತ್ತು. ೧೯೮೯-೧೯೯೪ರ ಅವಧಿಯಲ್ಲಿ ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದರು. ವೀರೇಂದ್ರ ಪಾಟೀಲ್, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ.
೧೯೯೨-೯೪ರ ತನಕ ಮುಖ್ಯಮಂತ್ರಿಯಾಗಿದ್ದ ವೀರಪ್ಪಮೊಯ್ಲಿಯವರು ೧೯೯೩ರ ಕೊನೆಯ ವೇಳೆಗೆ ಚಿನ್ನಪ್ಪರೆಡ್ಡಿ ವರದಿಯನ್ನು ಜಾರಿಗೊಳಿಸುವ ಕ್ರಮಗಳಿಗೆ ಮುಂದಾದರು. ಆ ವೇಳೆಗಾಗಲೇ ಇಂದಿರಾ ಸಾಹನಿ ಪ್ರಕರಣದಲ್ಲಿ ಮಂಡಲ್ ಅಯೋಗದ ಸಿಂಧುತ್ವವನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಒಟ್ಟಾರೆ ಮೀಸಲಾತಿಯ ಮೇಲ್ಮಿತಿಯನ್ನು ಶೇ. ೫೦ಕ್ಕೆ ಸೀಮಿತಗೊಳಿಸಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ೧೯೯೪ರ ಸೆಪ್ಟೆಂಬರ್ ೧೭ ರಂದು ವೀರಪ್ಪ ಮೊಯ್ಲಿ ಸರ್ಕಾರ ಒಂದು ಸರ್ಕಾರಿ ಆದೇಶವನ್ನು ಹೊರಡಿಸಿ ಈಗಲೂ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೆಸಲಾತಿ ಸೂತ್ರವನ್ನು ಜಾರಿಗೊಳಿಸಿತು. ಈ ಸೂತ್ರದ ಭಾಗವಾಗಿಯೇ ಮುಸ್ಲಿಮರಿಗೆ ೨-ಬಿ ಪ್ರವರ್ಗದಲ್ಲಿ ಶೇ. ೪ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು. ಆಸಕ್ತರು ಈ ಆದೇಶವನ್ನು ಈ ಕೆಳಗಿನ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು : https://kscbc.karnataka.gov.in/storage/pdf-files/GO%20No%20SWD%20150%20BCA%2094%20Dated%2017%2009%201994.pdf
೧೯೯೪ರ ನಂವಂಬರ್ – ಡಿಸೆಂಬರ್ ನಲ್ಲಿ ರಾಜ್ಯ ಶಾಸನ ಸಭೆಗೆ ಚುನಾವಣೆ ನಡೇದು ಕಾಂಗ್ರೆಸ್ ಸೋತು ದೇವೇಗೌಡರ ನೇತೃತ್ವದ ಜನತಾ ದಳ ಸರ್ಕಾರ ಅಧಿಕಾರಕ್ಕೆ ಬಂತು. ದೇವೇಗೌಡರ ಸರ್ಕಾರವೂ ವೀರಪ್ಪ ಮೊಯ್ಲಿ ಸರ್ಕಾರದ ಮೀಸಲಾತಿ ಸೂತ್ರವನ್ನೇ ಮುಂದುವರೆಸಿತು. ೨೦೨೩ರಲ್ಲಿ ಬೊಮ್ಮಾಯಿ ಸರ್ಕಾರ ಈ ಸೂತ್ರವನ್ನು ರದ್ದುಗೊಳಿಸುವ ತನಕ ಎಲ್ಲಾ ಸರ್ಕಾರಗಳೂ ೧೯೯೪ರ ಸೂತ್ರವನ್ನೆ ಮುಂದುವರೆಸಿಕೊಂಡು ಬಂದಿದ್ದವು. ಕಾಲಕಾಲಕ್ಕೆ ಕೆಲವು ಜಾತಿಗಳ ಪ್ರವರ್ಗ ಬದಲಾವಣೆ ಮತ್ತು ಸೇರ್ಪಡೆಗಳಾಗಿದೆಯೇ ವಿನಾ ಈವರೆಗೆ ೧೯೯೪ರ ವೀರಪ್ಪ ಮೊಯ್ಲಿ ಸರ್ಕಾರದ ಸೂತ್ರವೇ ಜಾರಿಯಲ್ಲಿದೆ. ಇದರ ಅರ್ಥ ಕಾಂಗ್ರೆಸ್ ಸರ್ಕಾರಗಳು ಮುಸ್ಲಿಮರ ರಕ್ಷಣೆಗೆ ಕಟಿಬದ್ಧವಾಗಿ ನಿಂತಿವೆ ಎಂತೇನೂ ಅಲ್ಲ. ೨೦೨೪ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಅಥವಾ ಸೆಕ್ಯುಲಾರಿಸಂ ಪದವೂ ಇಲ್ಲದಿರುವುದು, ಮುಸ್ಲಿಮರಿಗೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಸರಿ ಪ್ರಮಾಣದ ಪ್ರಾತಿನಿಧ್ಯ ಕೊಡದಿರುವುದು, ಇನ್ನಿತರ ಹತ್ತು ಹಲವು ಜ್ವಲಂತ ಉದಾಹರಣೆಗಳನ್ನು ನೀಡಬಹುದು. ಅದೇನೇ ಇದ್ದರೂ ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲಾತಿಯಡಿ ಪ್ರವರ್ಗ ೨-ಬಿ ಯಡಿ ಶೇ.೪ ರಷ್ಟು ಮೀಸಲಾತಿ ಕಲ್ಪಿಸಿದ್ದು ಮಾತ್ರ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ವಿನಾ ದೇವೇಗೌಡರಲ್ಲ. ಅವರು ಅದೇ ಸೂತ್ರವನ್ನು ಮುಂದುವರೆಸಿದರು ಅಷ್ಟೆ. ಈಗಲಾದರೂ ಮುಸ್ಲಿಂಮೀಸಲಾತಿಯ ಬಗ್ಗೆ ಇರುವ ಮಿಥ್ಯಾ ಕಥನಗಳು ನಿಲ್ಲಬಹುದೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು...
Leave a reply